ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕೋಲಾಹಲಕ್ಕೆ ಕಾರಣವಾಗಿದೆ. ಅದರಲ್ಲೂ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಬಗ್ಗೆ ಲಘುವಾಗಿ ಟೀಕೆ ಮಾಡಿರುವ ಕಾಂಗ್ರೆಸ್ ಬಗ್ಗೆ ಹರಿಹಾಯ್ದ ಕುಮಾರಸ್ವಾಮಿ, KST ಟ್ಯಾಕ್ಸ್ ನಾನು ಇಟ್ಕೊಂಡಿಲ್ಲ. ಹಿಂದೆ ನಾನು ಕಾಂಗ್ರೆಸ್ ಪಕ್ಷದ ಮೈತ್ರಿ ಸರಕಾರ ರಚನೆ ಮಾಡಿದ್ದೆ. ಒಂದು ವೇಳೆ ವೆಸ್ಟೆಂಡ್ ಬಾಕಿ ಬಿಲ್ ಕಾಂಗ್ರೆಸ್’ಗೆ ಕಳಿಸಿದರಾ ಎನ್ನುವುದು ನನ್ನ ಅನುಮಾನ ಎಂದು ಪ್ರಶ್ನಿಸಿದರು.
ನಾನೇನು ಬೀದಿಲಿ ಹೋಗೋದಾ? ಮುಖ್ಯಮಂತ್ರಿಯಾಗಿ ಬೀದಿಯಲ್ಲಿ ಇರಬೇಕಿತ್ತಾ? ಸ್ವಲ್ಪ ಹಣ ಖರ್ಚು ಮಾಡುವ ಯೋಗ್ಯತೆಯೂ ನನಗೆ ಇಲ್ವಾ? ತಾಜ್ ವೆಸ್ಟ್ ಎಂಡ್ನಲ್ಲಿ ಈಗಲೂ ರೂಂ ಇದೆ. ಇವರನ್ನು ಕೇಳಿ ನಾನು ರೂಂ ಮಾಡಬೇಕಾ? ಎಷ್ಟು ಗಂಟೆಗೆ ವಾಶ್ರೂಂಗೆ ಹೋಗಬೇಕು ಎಂದು ಕಾಂಗ್ರೆಸ್ನವರನ್ನ ಕೇಳಬೇಕಾ? ಬೇಕಿದ್ದರೆ ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ನನ್ನ ಎಷ್ಟಿತ್ತು ಆಸ್ತಿ? ಈಗ ಎಷ್ಟಿದೆ ಅಂತ ತನಿಖೆ ಮಾಡಲಿ ಎಂದು ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ನಾನು ಬೇಸಾಯ ಮಾಡಿದವನು, ಸಿನಿಮಾ ಮಾಡಿದವನು. ಕೆಲವರಂತೆ ಟೆಂಟಿನಲ್ಲಿ ನೀಲಿಚಿತ್ರ ತೋರಿಸಿ ದುಡ್ಡು ಮಾಡಿದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ? ನಾನು ಹೇಗೆ ಬೆಳೆದುಬಂದೆ ಎನ್ನುವ ಅರಿವು ನನಗೂ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆಗಳ ಬಗ್ಗೆ ನನ್ನ ಬಳಿ ಹುಡುಗಾಟ ಆಡುವುದು ಬೇಡ. ದಾಖಲೆ ಇಲ್ಲದೆ ನಾನು ಮಾತನಾಡುವುದಿಲ್ಲ. ಕಳೆದ ಮೂರೂವರೆ ವರ್ಷ ಒಂದು ದಾಖಲೆಯನ್ನೂ ಬಿಡದೆ ಕಾಂಗ್ರೆಸ್ ಪಕ್ಷ ಗಾಳಿಯಲ್ಲಿ ಗುಂಡು ಹೊಡೆಯಿತು. ನಾನು ಹಾಗೆ ಮಾಡುವುದಿಲ್ಲ. ದಾಖಲೆ ಇರುವ ಪೆನ್ ಡ್ರೈವ್ ನನ್ನ ಜೇಬಿನಲ್ಲೆ ಇದೆ. ಸಮಯ ಬರಲಿ, ಬಿಡುಗಡೆ ಮಾಡ್ತೀನಿ ಎಂದು ಸ್ಪಷ್ಟ ಮಾತುಗಳಲ್ಲಿ ಕುಮಾರಸ್ವಾಮಿ ಹೇಳಿದರು.
ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಮಾತನಾಡಲಿ, ಅದು ಅವರ ಗುಣ ತೋರಿಸುತ್ತದೆ. ಎಲ್ಲಕ್ಕೂ ಕಾಲವೇ ಉತ್ತರ ನೀಡುತ್ತದೆ. ನಿನ್ನೆ ಮಂಡ್ಯದಲ್ಲಿ ಒಂದು ವರ್ಗಾವಣೆ ಆಯ್ತಲ್ಲ, ತಪ್ಪು ಎಸಗಿ ಸೇವೆಯಿಂದ ಅಮಾನತು ಆದವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಪಟ್ಟ ಕಟ್ಟಿದ್ದಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದವನು ನಾನು. ಇವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದರು.
ಮೈ ಕೈ ಪರಚಿಕೊಳ್ಳೋದು ಬೇಡ ಅಂತಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಾನೇಕೆ ಮೈ ಕೈ ಪರಚಿಕೊಳ್ಳಲಿ?ಸೋತಾಗಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಅಧಿಕಾರ ಬಂದಾಗ ಹಿಗ್ಗಿಲ್ಲ, ಇಲ್ಲದಾಗ ಕುಗ್ಗಿಲ್ಲ . ಇವರಿಂದ ಕಲಿಯೋ ದರಿದ್ರ ನಂಗೆ ಬಂದಿಲ್ಲ ಎಂದು ಹೆಚ್ಡಿಕೆ ಕಿಡಿಕಾರಿದರು.
ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ?:
ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣ ಪ್ರಸ್ತಾಪ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಕುಮಾರಸ್ವಾಮಿ, ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ, ಜೋಕೆ ಎಂದು ಎಚ್ಚರಿಸಿದರು.
ಬೆಂಗಳೂರು ಅಭಿವೃದ್ಧಿ ಮಾಡೋಕೆ ಹೋಗಿ ಈಗಾಗಲೇ ಸಮಾಧಿ ಮಾಡಿದ್ದೀರಿ. ಬೆಂಗಳೂರು ಅಭಿವೃದ್ಧಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ತಾಂತ್ರಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿ. ಟನಲ್ ಮಾಡೋಕೆ ಹೋಗಿ ಇಡೀ ನಗರವನ್ನೇ ಸಮಾಧಿ ಮಾಡಬೇಡಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.