ವಿಜಯಪುರ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸುಳಿವನ್ನು ನೀಡಿದ್ದಾರೆ. ಕುಟುಂಬ ರಾಜಕಾರಣದಿಂದಾಗಿ ಬಿಜೆಪಿ ಸರ್ವನಾಶವಾಗಲಿದೆ ಎಂದಿರುವ ಯತ್ನಾಳ್. ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದು ಪಕ್ಷ ಆಸ್ತಿತ್ವಕ್ಕೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯುಗಾದಿ ಸಂದರ್ಭದಲ್ಲಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬಹಳಷ್ಟು ಜನರು ಬಿಜೆಪಿಯಿಂದ ಹಿಂದು ರಕ್ಷಣೆ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನು ದುರ್ಬಲ ಮಾಡಿದೆ. ಹೀಗಾಗಿ ಹಿಂದುಗಳ ರಕ್ಷಣೆ, ದೇಶಕ್ಕಾಗಿ ಹಿಂದು ಪಕ್ಷ ಆಸ್ವಿತ್ವ ತರಬೇಕಾಗಿದೆ ಎಂದು ಪ್ರತಿಪಾದಿಸಿದರು.
‘ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಯಡಿಯೂರಪ್ಪ ಬಿಟ್ಟು ನಮಗೆ ಬೇರೆ ಗತಿಯಿಲ್ಲ ಎಂದು ನೀವು ಹೇಳಿದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತದೆ ಎಂದಿರುವ ಯತ್ನಾಳ್, ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಹೊಸ ಪಕ್ಷದ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ತಿಳಿಸಿದರು. ಹೊಸ ಪಕ್ಷ ಕಟ್ಟುವ ನಿರ್ಧಾರ ಮಾಡಿಲ್ಲ. ಗೌರವಯುತವಾಗಿ, ‘ವಿತ್ ಪವರ್’ ಬಿಜೆಪಿಗೆ ವಾಪಸ್ ಬರುತ್ತೇನೆ’ ಎಂದರು.
ತಮ್ಮ ಸ್ವಾರ್ಥಕ್ಕಾಗಿ ಬಿಎಸ್‌ವೈ-ವಿಜಯೇಂದ್ರ ಹಿಂದುತ್ವವಾದಿಗಳನ್ನ ತುಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾನು ಈಗ ಬಲಿಯಾಗಿದ್ದಾನೆ ಎಂದ ಯತ್ನಾಳ್, ನನ್ನನ್ನು ಉಚ್ಛಾಟನೆ ಮಾಡಿದರ ಹಿಂದೆ ಯಡಿಯೂರಪ್ಪ ಇದ್ದಾರೆ ಎಂದು ದೂರಿದರು. ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪವಿದೆ, ಪಕ್ಷದಲ್ಲಿ ವಂಶಪಾರಂಪರ್ಯ ಮುಂದುವರಿಸಲು ಬಿಎಸ್‌ವೈ ಕುಟುಂಬ ಮುಂದಾಗಿದೆ. ಇದೇ ರೀತಿ ಮುಂದುವರಿದರೆ ನಾವು ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಾಗುತ್ತದೆ. ಹಗರಣ ಮಾಡಿದ ಕುಟುಂಬವನ್ನು ಮುಂದುವರೆಸಿದರೆ ರಾಜ್ಯದ ಜನರು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.