ಬೆಂಗಳೂರು: ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೇರೋಹಳ್ಳಿ ವಾರ್ಡ್ ನ ಅಂಜನಾನಗರದಲ್ಲಿ ನೂತನವಾಗಿ ಆರಂಭಿಸಿರುವ ಕಚೇರಿಯನ್ನು ಉದ್ಘಾಟಿಸಿದ ಅವರು, ತಮ್ಮ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇಲ್ಲ. ಬಿಜೆಪಿಯಿಂದ ಎರಡನೇ ಬಾರಿ ಕಣಕ್ಕಿಳಿಯುವ ಅವಕಾಶವನ್ನು ಪಕ್ಷ ನೀಡಿದೆ. ಕಳೆದ ಮೂರುವರೆ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಾನು ಕ್ಷೇತ್ರದ ಜನತೆಯ ಜೊತೆಗೆ ಇದ್ದೆ. ಲಸಿಕೆ, ಫುಡ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು. ಸೋತ ನಂತರ ಕ್ಷೇತ್ರದ ಕಡೆ ತಲೆ ಹಾಕದವರು ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಐದು ವರ್ಷಕ್ಕೆ ಒಮ್ಮೆ ಬರುವವರು ಅಂತ ನಾವು ಹೇಳುತ್ತಿಲ್ಲ. ಜೆಡಿಎಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಹೇಳಿದರು.
ನಂದಿನಿ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಮೂಲ್ ಮಾತ್ರವಲ್ಲ ಬೇರೆ ಯಾವುದೇ ಬಂದರೂ ನಂದಿನಿಗೆ ಸರಿಸಾಟಿಯಾಗಲ್ಲ. ನಂದಿನಿ ಉತ್ಪನ್ನಗಳು ವಿಶ್ವದ ನಾನಾ ಕಡೆ ಮಾರಾಟ ಆಗುತ್ತಿವೆ. ಅಮೂಲ್ ಜೊತೆ ನಂದಿನಿ ವಿಲೀನ ಆಗಲಿದೆ ಎಂಬುದು ಚುನಾವಣಾ ಗಿಮಿಕ್. ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.