ಬೆಂಗಳೂರು: ಕರಸೇವಕರ ಬಂಧನ ಹಾಗೂ ದತ್ತಪೀಠ ಹೋರಾಟಗಾರರ ವಿರುದ್ದದ ಹಲವು ವರ್ಷಗಳ ಹಿಂದಿನ ಕೇಸ್ ಮರು ಆರಂಭಿಸಿರುವ ರಾಜ್ಯ ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತವಾಗಿದೆ.
ಏಳು ವರ್ಷಗಳ ಬಳಿಕ ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚಿಕ್ಕಮಗಳೂರಿನ ಪೆಟ್ರೋಲ್ ಬಾಂಬ್ ಕೇಸ್ ಏನಾಯಿತು? ಆ ಕೇಸ್ ರೀಓಪನ್ ಆಗಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರವು ಹಿಂದೂ ಹೋರಾಟಗಾರರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಭಯೋತ್ಪಾದಕರ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್, ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಗೋರಿಗಳ ಧ್ವಂಸದ ಬಳಿಕ, 2017ರ ಡಿಸೆಂಬರ್ 3ರಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿತ್ತು. ಪೆಟ್ರೋಲ್ ಬಾಂಬ್ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಆಗಿನ ಸರ್ಕಾರ ಆಗಿನ ಎಸ್ಪಿ ಅಣ್ಣಾಮಲೈ ಮೇಲೆ ಒತ್ತಡ ಹಾಕಿ ಪ್ರಕರಣದ ಕೇಸ್ ಫೈಲ್ ಮಾಡದಂತೆ ತಡೆದಿತ್ತು ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಕರಸೇವಕರ ಬಂಧನ ಹಾಗೂ ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗುತ್ತದೆ ಅಂದರೆ ಪೆಟ್ರೋಲ್ ಬಾಂಬ್ ಕೇಸ್ ಬಗ್ಗೆ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಮೋದ್ ಮುತಾಲಿಕ್ ಅವರು ಗೃಹ ಸಚಿವ ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ.




















































