ಬೆಂಗಳೂರು: ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಸೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿ ಉತ್ತರ ಕೋರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ವೈಖರಿಯನ್ನು ನೆನಪಿಸುತ್ತಿದೆ ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಕರಾಳ ಇತಿಹಾಸ ಅತ್ಯಂತ ಪ್ರಿಯವಾಗಿರುವಂತಿದೆ, ಈ ಕಾರಣಕ್ಕಾಗಿಯೇ ಕಲಬುರಗಿ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ನೆನಪಿಸುವ ರೀತಿಯ ಆಡಳಿತವನ್ನು ಜಾರಿಗೆ ತರಲು ಹೊರಟಿದ್ದಾರೆ, ಇದಕ್ಕಾಗಿ ಚಿತ್ತಾಪುರವನ್ನು ಚಿಮ್ಮುವ ಹಲಗೆಯಂತೆ ಪ್ರಯೋಗಿಸುತ್ತಿದ್ದಾರೆ ಎಂದವರು ಸಾಮಾಜಿಕ ಮಾಧ್ಯಮ ‘X’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಡಾ.ಬಾಬಾ ಸಾಹೇಬ್ ಅವರು ರಚಿಸಿದ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಚಿತ್ತಾಪುರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. RSS ಪಥಸಂಚಲನ ಹಾಗೂ ಕಾರ್ಯಕ್ರಮದ ಅನುಮತಿಗೆ ವಿಧಿಸಿರುವ ಷರತ್ತುಗಳನ್ನು ರಾಜ್ಯಕ್ಕೆ ಅನ್ವಯಿಸಿ ಬಿಟ್ಟರೆ ಕರ್ನಾಟಕದ ಯಾವುದೇ ಮೂಲೆಗಳಲ್ಲೂ ಯಾವುದೇ ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲು ಆಸ್ಪದವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಮಾದರಿಯ ಆಡಳಿತ ಹೇರಲು ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುತ್ತಿದೆ ಅದಕ್ಕೆ ಚಿತ್ತಾಪುರವನ್ನು ಪ್ರಯೋಗಾಲಯ ಮಾಡಿಕೊಂಡಿದೆ ಎಂದವರು ಆರೋಪಿಸಿದ್ದಾರೆ.
“ಚಿತ್ತಾಪುರದಲ್ಲಿ ಸದ್ಯ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ V/S ಪ್ರಜಾಪ್ರಭುತ್ವದ ನಡುವಿನ ಸಮರ” ಇದನ್ನು ಸವಾಲಾಗಿ ಸ್ವೀಕರಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಭಾರತೀಯ ಜನತಾ ಪಾರ್ಟಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ವಿಜಯೇಂದ್ರ ರಣಕಹಳೆ ಮೊಳಗಿಸಿದ್ದಾರೆ.
ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಸೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿ ಉತ್ತರ ಕೋರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ… pic.twitter.com/6DJQlhWQW9
— Vijayendra Yediyurappa (@BYVijayendra) October 19, 2025