ಬೆಂಗಳೂರು: ಪರಿಷತ್ ಫೈಟ್‌ಗೆ ಸನ್ನದ್ಧವಾಗಿರುವ ಜಾತ್ಯತೀತ ಜನತಾ ದಳ ಸೋಮವಾರದಂದು ಕಲಿಗಳ ಪಟ್ಟಿ ಪ್ರಕಟಿಸಲಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಂಡ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಣೆ ಮಾಡಲಾಗುವುದು ಎಂದರು.
ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಮಗೆ ಶಕ್ತಿ ಇರುವ ಆರು ಅಥವಾ ಎಂಟು ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಕೋಲಾರ ಅಭ್ಯರ್ಥಿ ಬಗ್ಗೆ ಭಾನುವಾರ ಸಂಜೆ ತೀರ್ಮಾನ ಮಾಡಲಾಗುವುದು. ಮಂಡ್ಯದಲ್ಲಿ ಹಾಲಿ ಸದಸ್ಯರೇ ಮರು ಸ್ಫರ್ಧೆ ಮಾಡುತ್ತಿದ್ದಾರೆ. ದೇವೇಗೌಡರ ಜತೆ ಅಂತಿಮ ಚರ್ಚೆ ಮಾಡಿ ಅಂತಿಮ ಪ್ರಕಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಂದೇಶ್ ನಾಗರಾಜ್ ಮತ್ತು ಸಿ.ಆರ್. ಮನೋಹರ್ ಮತ್ತೆ ಪಕ್ಷಕ್ಕೆ ವಾಪಸ್ ಬರುವ ವಿಚಾರ ನನ್ನ ಮುಂದೆ ಪ್ರಸ್ತಾಪ ಇಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲ ಅಂತ ಅವರು ಹೋದವರು. ಮೂರು ವರ್ಷದ ಹಿಂದೆಯೇ ಪಕ್ಷ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಸ್ಫರ್ಧೆ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ. ಸಾ.ರಾ.ಮಹೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಗ್ಗೆಯೂ ನನ್ನ ಮುಂದೆ ಯಾವುದೇ ಪ್ರಸ್ತಾಪ ಬಂದಿಲ್ಲ. ಹಾಗಾಗಿ ನಾನು ಉತ್ತರ ಕೊಡುವುದು ಅನವಶ್ಯಕ ಎಂದು ಅವರು ತಿಳಿಸಿದರು.