ಬೆಂಗಳೂರು: ರೇವಣ್ಣ ಪುರಾಣ ರಾಜ್ಯ ರಾಜಕಾರಣದಲ್ಲಿ ನಿರಂತರ ಸುದ್ದಿಯಾಗುತ್ತಿದೆ. ಅದೇ ಹೊತ್ತಿಗೆ ಯಕ್ಷಗಾನದ ಒಂದು ಸನ್ನಿವೇಶದಲ್ಲಿ ಪ್ರತಿಧ್ವನಿಸಿರುವ ‘ರೇವಣ್ಣ’ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ರೇವಣ್ಣ ಹೆಸರು ಕೇಳಿಬಂದಿದೆ. ಅದೇ ಸಂದರ್ಭದಲ್ಲಿ ಯಕ್ಷಗಾನದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ. ರಂಗಸ್ಥಳದಲ್ಲಿ ಕಲಾವಿದರ ನಡುವೆ ನಡೆದ ಸಂಭಾಷಣೆಯ ವೀಡಿಯೋದಲ್ಲಿ ‘ರೇವಣ್ಣ’ ಹೆಸರು ಪ್ರಸ್ತಾಪವಾಗಿದೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕೂಡಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅದು ಇಲ್ಲಿಗೂ ಬಂತಾ ?! pic.twitter.com/mkETOHCoJt
— Vishweshwar Bhat (@VishweshwarBhat) May 25, 2024
ಯಕ್ಷಗಾನದಲ್ಲಿ ಪುರಾಣ ಕಥೆಗಳನ್ನಾಧರಿಸಿದ ಪ್ರಸಂಗದಲ್ಲೂ ಕೆಲವೊಮ್ಮೆ ಹಾಸ್ಯಕ್ಕಾಗಿ ಪ್ರಸಕ್ತ ವಿದ್ಯಮಾನಗಳನ್ನು ಹೋಲುವಂತೆ ಮಾತುಕತೆಗಳು ನಡೆಯುವುದುಂಟು. ಈ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದೂ ಸಾಮಾನ್ಯ. ಇಲ್ಲೊಂದು ವೈರಲ್ ವೀಡಿಯೋದಲ್ಲಿ ‘ರೇವಣ್ಣ’ ಹೆಸರು ಪ್ರಸ್ತಾಪವಿದೆ. ರಂಗಸ್ಥಳದಲ್ಲಿ ಹಾಸ್ಯ ಕಲಾವಿದರೊಬ್ಬರು ರಾಮಾಯಣದ ಘಟನೆಯನ್ನು ಬೊಟ್ಟು ಮಾಡಿ, ‘ಹೆಣ್ಮಕ್ಕಳ ವಿಚಾರಕ್ಕೆ ಹೋದರೆ ಏನಾಗಬಹುದೆಂಬುದಕ್ಕೆ ಆವತ್ತು ಸೀತೆಯನ್ನು ಅಪಹರಿಸಿದ ರೇವಣ್ಣನ ಸ್ಥಿತಿ ಏನಾಯಿತು ಗೊತ್ತೇನೋ..?’ ಎಂದು ಪ್ರಶ್ನಿಸುತ್ತಾನೆ.
ಇದರಿಂದ ಗಲಿಬಿಲಿಗೊಂಡಂತೆ ನಟಿಸುವ ಮತ್ತೊಬ್ಬ ಕಲಾವಿದ, ‘ರೇವಣ್ಣ ಅಲ್ಲ ಸೀತೆಯನ್ನು ಅಪಹರಿಸಿದ್ದು, ರೇವಣ್ಣ ಬೇರೆ ಯಾರನ್ನೋ ಅಪಹರಿಸಿದ್ದು..’ ಎಂದು ಹೇಳುತ್ತಾನೆ.
ಈ ಹಾಸ್ಯ ಸನ್ನಿವೇಶದ ವೀಡಿಯೋ ನೆಟ್ಟಿಗರನ್ನು ರಂಜಿಸಿದೆ. ಆದರೆ, ಯಕ್ಷಗಾನದಲ್ಲಿ ಇಂತಹಾ ಹಾಸ್ಯದ ಅಗತ್ಯವಿದೆಯೇ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.




















































