ಬೆಂಗಳೂರು: VB G-RAM-G ಯೋಜನೆ ಕುರಿತು ಕಾಂಗ್ರೆಸ್ ಪಕ್ಷವು ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಈ ಕುರಿತು ದಾಖಲೆಗಳೊಂದಿಗೆ ಬಹಿರಂಗ ಸಾರ್ವಜನಿಕ ಚರ್ಚೆಗೆ ಬರಲು ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಅವರು ಸವಾಲು ಹಾಕಿddaare
MGNREGA ರದ್ದುಪಡಿಸಿ ಕೇಂದ್ರ ಸರ್ಕಾರ VB G-RAM-G ಜಾರಿಗೆ ತಂದಿದೆ ಎಂಬ ಆರೋಪವನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ್ದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ಪ್ರತಿಕ್ರಿಯೆ ನೀಡಿದರು. ಈ ವಿಷಯದ ಬಗ್ಗೆ ಕೇಂದ್ರ ಸಚಿವರ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗತ್ಯವಿದ್ದರೆ ಚರ್ಚೆಯ ಜೊತೆಗೆ ದೊಡ್ಡ ಆಂದೋಲನಕ್ಕೂ ಸಿದ್ಧ ಎಂದು ಹಾಕಿದ್ದಾರೆ.
ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೂಪಿಸಲಾದ ಯೋಜನೆ ಕುರಿತು ಕಾಂಗ್ರೆಸ್ ತಪ್ಪು ನಿರೂಪಣೆ ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕಾಂಗ್ರೆಸ್ ಸುಳ್ಳುಗಳನ್ನು ಜನರು ಅಂಧವಾಗಿ ನಂಬುತ್ತಿದ್ದ ಕಾಲ ಮುಗಿದಿದೆ” ಎಂದು ಹೇಳಿದರು.
ಕಾಂಗ್ರೆಸ್ ದಶಕಗಳ ಕಾಲ ದೇಶವನ್ನು ಆಳಿದರೂ ಮಹಾತ್ಮ ಗಾಂಧಿಯವರ ಹೆಸರನ್ನು ಯಾವುದೇ ಪ್ರಮುಖ ಯೋಜನೆಗೆ ನೀಡಲಿಲ್ಲ ಎಂದು ಆರೋಪಿಸಿದ ಅವರು, “ಎಲ್ಲಕ್ಕೂ ನೆಹರು ಕುಟುಂಬದ ಹೆಸರನ್ನೇ ಬಳಸಿದರು. ಗಾಂಧೀಜಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಗೆ ಇಲ್ಲ” ಎಂದು ಟೀಕಿಸಿದರು.
ಜಿ-ರಾಮ್-ಜಿ ಕುರಿತು ಮುಕ್ತ ಚರ್ಚೆಗೆ ಆಗ್ರಹಿಸಿದ ಕುಮಾರಸ್ವಾಮಿ, ಪಂಚಾಯತ್ಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುವ ಸರ್ಕಾರವೇ ಪಂಚಾಯತ್ ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಆಕ್ಷೇಪಿಸಿದರು. “ರಾಜ್ಯದಲ್ಲಿ ಉತ್ತಮ ವಾತಾವರಣವನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ” ಎಂದರು.
ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂಜಿಎನ್ಆರ್ಇಜಿಎ ನಿಧಿಯಲ್ಲಿ 800 ಕೋಟಿ ರೂ. ವಿಳಂಬವಾಗಿದ್ದರೂ, ರಾಜ್ಯ ಖಜಾನೆಯಿಂದಲೇ ಕಾರ್ಮಿಕರ ವೇತನ ಪಾವತಿಸಿದ್ದೆವು ಎಂದು ಅವರು ನೆನಪಿಸಿಕೊಂಡರು. “ಇಂದಿನ ಸರ್ಕಾರಕ್ಕೆ ಕೇಂದ್ರವನ್ನು ಹೇಗೆ ಎದುರಿಸಬೇಕೆಂಬುದೇ ಗೊತ್ತಿಲ್ಲ” ಎಂದು ಟೀಕಿಸಿದರು.
MGNREGA ರದ್ದುಪಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಮೋದಿ ಸರ್ಕಾರ ಹಳೆಯ ಅಕ್ರಮಗಳನ್ನು ಸರಿಪಡಿಸಿ ಪಾರದರ್ಶಕ ವ್ಯವಸ್ಥೆ ತಂದಿದೆ ಎಂದರು. VB G-RAM-G ಯೋಜನೆ ಪಂಚಾಯತ್ಗಳು ಅಥವಾ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಡಿಮೆ ಮಾಡುವುದಿಲ್ಲ, ಸಂಪೂರ್ಣ ನಿಧಿ ಕೇಂದ್ರದಿಂದ ಬರುತ್ತದೆ; ಆದರೆ ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗಿದೆ ಎಂದು ಹೇಳಿದರು.
ಹೊಸ ಯೋಜನೆಯು 60:40 ನಿಧಿ ಮಾದರಿಯನ್ನು ಅನುಸರಿಸಲಿದೆ. “ರಾಜ್ಯ ಸರ್ಕಾರಗಳು ಶೇ.40ರಷ್ಟು ಹೊಣೆಗಾರಿಕೆ ವಹಿಸಬೇಕು. ಅಧಿಕಾರ ಕಸಿದುಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
MGNREGA ಅಡಿಯಲ್ಲಿ ನಕಲಿ ಬಿಲ್ಗಳು, ನಕಲಿ ಉದ್ಯೋಗ ಕಾರ್ಡ್ಗಳ ಮೂಲಕ ಸಾರ್ವಜನಿಕ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಈ ದೋಷಗಳನ್ನು ಸರಿಪಡಿಸಲು ಕಾಂಗ್ರೆಸ್ ವಿಫಲವಾಯಿತು. ಈಗ ಸರಿಪಡಿಸಿದರೆ ತಪ್ಪು ಎನ್ನುತ್ತಿದ್ದಾರೆ” ಎಂದು ಕಿಡಿಕಾರಿದರು.
ಗ್ರಾಮ ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ, ಗ್ರಾಮಸಭೆಗಳ ಮೂಲಕ ಯೋಜನೆಗಳಿಗೆ ಆದ್ಯತೆ ಹಾಗೂ ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು VB G-RAM-G ಒಳಗೊಂಡಿದೆ. “ಈ ಮಟ್ಟದ ಪಾರದರ್ಶಕತೆ ಕಾಂಗ್ರೆಸ್ಗೆ ಇಷ್ಟವಿಲ್ಲ” ಎಂದು ಅವರು ಆರೋಪಿಸಿದರು.



















































