ಉಡುಪಿ: ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಇದೀಗ ಮತ್ತೊಂದು ಮಹಾತ್ಕಾರ್ಯ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಮಹಾದಾನಿ, ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಮುಂದಾಳುತ್ವದಲ್ಲಿ ಈ ಟ್ರಸ್ಟ್ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು 9ನೇ ಮನೆಯ ದಾನದ ಕೈಂಕರ್ಯದಲ್ಲಿ ನಾಡಿನ ಅನೇಕ ಗಣ್ಯರು ಭಾಗಿಯಾದರು.
ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆ ನಿರತ ಬೆಂಗಳೂರಿನ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಅನೇಕ ನಿರ್ಗತಿಕ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ‘ಆಧುನಿಕ ಕರ್ಣ’ ಎನಿಸಿಕೊಂಡಿದ್ದಾರೆ.
ಇದೀಗ ನವರಾತ್ರಿ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಬೈಂದೂರು ಸಮೀಪದ ಗಂಗಾನಾಡು ಎಂಬಲ್ಲಿ 9ನೇ ಮನೆಯ ಸಮರ್ಪಣಾ ಸಮಾರಂಭ ನೆರವೇರಿತು.
ಈ ಬಾರಿ ಗೋವಿಂದ ಬಾಬು ಪೂಜಾರಿಯವರು ಮನೆಯನ್ನು ದಾನವಾಗಿ ನೀಡಿರುವುದು ಗಂಗಾನಾಡು ನಿರೋಡಿ ರಾಮ ಮರಾಠ ದಂಪತಿಗಳಿಗೆ. ಶಿಥಿಲಾವಸ್ಥೆಯಲ್ಲಿದ್ದ ಈ ದಂಪತಿಯ ಬದುಕು ಬವಣೆ ಬಗ್ಗೆ ತಿಳಿದ ಡಾ.ಗೋವಿಂದ ಬಾಬು ಪೂಜಾರಿಯವರು ಈ ಬಡಪಾಯಿ ಕುಟುಂಬಕ್ಕೆ ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಸಜ್ಜಿತ ಮನೆಯನ್ನು ಕಟ್ಟಿ ಕೊಟ್ಟರು. ನವರಾತ್ರಿ ಸಂದರ್ಭದಲ್ಲಿ ಗಣ್ಯರ, ಧಾರ್ಮಿಕ ಪ್ರಮುಖರ, ಯತಿಗಳ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಸಮಾರಂಭ ಆಯೋಜಿಸಿ ಮನೆಯನ್ನು ದಾನವಾಗಿ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ದಾನಿ ಡಾ.ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಮರಾಠ ಸಮುದಾಯದ ಗಣ್ಯರು ಸನ್ಮಾನಿಸಿದರು.
ಪ್ರತಿಷ್ಠಿತ ಆಹಾರೋದ್ದಿಮೆ ಸಂಸ್ಥೆ ChefTalkನ ಮಾಲೀಕರೂ ಆಗಿರುವ ಡಾ.ಗೋವಿಂದ ಬಾಬು ಪೂಜಾರಿಯವರು, ಸಾಮಾಜಿಕ ಕೈಂಕರ್ಯಕ್ಕೆಂದೇ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ತಮ್ಮ ಸ್ವಂತ ದುಡಿಮೆಯ ಹಣದಿಂದಲೇ ಈ ಟ್ರಸ್ಟ್ ಮೂಲಕ ಜನರಿಗೆ ನೆರವು ನೀಡುತ್ತಿದ್ದಾರೆ.
ಬಿರು ಬೇಸಿಗೆಯ ಸಂದರ್ಭದಲ್ಲಿ ಜೀವಜಲಕ್ಕಾಗಿ ಜನ ಪರದಾಡುತ್ತಿದ್ದುದನ್ನು ಗಮನಿಸಿದ್ದ ಈ ಪೂಜಾರಿ, ಉಡುಪಿ ಜಿಲ್ಲೆಯ ಹಲವು ಗ್ರಾಮಗಳಿಗೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಬಿರುಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ಮನೆ ಕಳೆದುಕೊಂಡ ಕರಾವಳಿ ತೀರದ ಹಲವು ಬಡ ಕುಟುಂಬದವರ ಮನೆಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿಪಡಿಸಿದ್ದಾರೆ.
ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗ ಕಲ್ಪಿಸಲೆಂದೇ ಹತ್ತಾರು ಕಂಪನಿಗಳನ್ಬು ಹುಟ್ಟುಹಾಕಿದ್ದಾರೆ.
ಮೀನುಗಾರರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ತಮ್ಮ ತವರಿನ ಮೀನುಗಾರರಿಗೆ ಮಾರುಕಟ್ಟೆ ಒದಗಿಸಲೆಂದೇ ನಾಡಿನಲ್ಲೇ ಮೊದಲೆಂಬಂತೆ ‘ಮೀನಿನ ಚಿಪ್ಸ್, ವೇಫರ್ಸ್’ ಫ್ಯಾಕ್ಟರಿ ಸ್ಥಾಪಿಸಿದ್ದಾರೆ.
ಹಲವಾರು ಬಡಕುಟುಂಬಗಳಿಗೆ ಮನೆಗಳನ್ನು ಕಟ್ಟಿ ದಾನ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ವೈದ್ಯಕೀಯ ನೆರವು ನೀಡಿರುವ ಪೂಜಾರಿಯವರು, ಹಲವಾರು ಮಂದಿಗೆ ತಮ್ಮ ಮನೆಯಲ್ಲೇ ವಸತಿ ವ್ಯವಸ್ಥೆ ಕಲ್ಪಿಸಿ ವೈದ್ಯಕೀಯ ನೆರವು ನೀಡಿದವರು.
ಉದ್ಯಮ ಆಕಾಂಕ್ಷಿ ಉತ್ಸಾಹಿ ಯುವಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಎಂಬ ಹಣಕಾಸು ಸಂಸ್ಥೆ ಕಟ್ಟಿ ಸಾವಿರಾರು ಮಂದಿಗೆ ನೆರವಾಗುತ್ತಿದ್ದಾರೆ.
ಪೌರ ಕಾರ್ಮಿಕರಿಗೂ ಆರೋಗ್ಯ, ಊಟೋಪಚಾರ, ರೇಷನ್ ವ್ಯವಸ್ಥೆ ಮೂಲಕ ನೆರವು ನೀಡುತ್ತಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕೆ ಸೌಲಭ್ಯ ಮುಂದುವರಿಸುವ ಉದ್ದೇಶದಿಂದ ಗೋವಿಙದ ಪೂಜಾರಿಯವರು ಕರಾವಳಿಯಲ್ಲಿ ಸುಸಜ್ಜಿತ ಶಾಲೆಯನ್ನು ಆರಂಭಿಸುವ ಪ್ರಯತ್ನದಲ್ಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ, ಅಸಂಖ್ಯ ಕುಟುಂಬಗಳಿಗೆ ಆಸರೆಯಾಗಿ, ಹತ್ತಾರು ಕ್ಷೇತ್ರಗಳಲ್ಲಿನ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿರುವ ಏಷ್ಯಾದ ಪ್ರತಿಷ್ಠಿತ ವೈದ್ಧಿಕ ವಿಶ್ವವಿದ್ಯಾಲಯವೊಂದು ಗೋವಿಂದ ಬಾಬು ಪೂಜಾರಿಯವರನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.