ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಹಠಾತ್ ತಿರುವು ಸಿಕ್ಕಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಿಎ ಹರೀಶ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ವಾಲ್ಮಿಕಿ ನಿಗಮದ ಬಹುಕೋಟಿ ಅಕ್ರಮ ಕುರಿತ ತನಿಖಾ ಅಖಾಡಕ್ಕೆ ಧುಮುಕಿರುವ ಜಾರಿ ನಿರ್ದೇಶನಾಲಯ ಬೆಂಗಳೂರು, ರಾಯಚೂರು, ಬಳ್ಳಾರಿ ಸಹಿತ ವಿವಿಧೆಡೆ ದಾಳಿ ನಡೆಸಿದ್ದಾರೆ.
ವಾಲ್ಮಿಕಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೂ ಲಗ್ಗೆ ಹಾಕಿದ ಇ.ಡಿ. ತಂಡ, ನಾಗೇಂದ್ರ ಅವರ ಆಪ್ತ ಹರೀಶ್‌ನನ್ನು ಬಂಧಿಸಿದೆ.
ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಹರೀಶ್ ಬಂಧನವಾಗಿದೆ ಎನ್ನಲಾಗಿದೆ. ಇದೇ ವೇಳೆ, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರಿಗೂ ಬಂಧನ ಭೀತಿ ಶುರುವಾಗಿದೆ.