ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಂಗ ಸಜ್ಜಾಗುತ್ತಿದ್ದು ರಾಜಕೀಯ ಪಕ್ಷಗಳೂ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಶತಪ್ರಯತ್ನದಲ್ಲಿದ್ದರೆ, ಈ ಬಾರಿ ಕರಾವಳಿಯನ್ನು ಕಸಿದುಕೊಳ್ಳಲು ಕಾಂಗ್ರೆಸ್ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.
ಕಳೆದ ಮೂರು ಅವಧಿಗಳಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೇ ಮುನಿಸಿಕೊಂಡಿದ್ದಾರೆ. ಇದೀಗ ನಳಿನ್ ಸ್ಥಾನಕ್ಕೆ ಬೇರೆ ಹೆಸರುಗಳು ಕೇಳಿಬರುತ್ತಿದ್ದು ಬಿಜೆಪಿಯಲ್ಲಿನ ವಿದ್ಯಮಾನಗಳು ಕುತೂಹಲ ಕೆರಳಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗ್ತಾರೆ ಎಂಬ ಕುತೂಹಲ ಕೂಡಾ ಎದುರಾಗಿದೆ.
ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಅಚ್ಚರಿಯ ಚರ್ಚೆಯೊಂದು ಸಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ನಡೆದಿದ್ದು ಅಂತಿಮ ಕ್ಷಣದಲ್ಲಿ ಯು.ಟಿ.ಖಾದರ್ ಅವರಿಗೆ ಅದೃಷ್ಟ ಕೂಡಿಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕರಾವಳಿಯಲ್ಲಿನ ಮುಸ್ಲಿಂ ಮತಗಳನ್ನು ಗಮನಿಸಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆದಿದೆ.
ಕಾಂಗ್ರೆಸ್ ಮತ ಗಣಿತ ಹೀಗಿದೆ:
ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ಸುಮಾರು 20 ಲಕ್ಷ ಇದ್ದು, ಮುಸ್ಲಿಂ 4,90,000 ಹಾಗೂ ಕ್ರೈಸ್ತ 1,80,000 ಮತಗಳಿವೆ. ಬಿಲ್ಲವರು ಸುಮಾರು 5.20 ಲಕ್ಷ, ಬಂಟರು 3.90 ಲಕ್ಷ, ದಲಿತರು 1.27 ಲಕ್ಷ, ಬ್ರಾಹ್ಮಣರು 1.30 ಲಕ್ಷ, ಒಕ್ಕಲಿಗರು 80 ಸಾವಿರ ಮಂದಿ. ಲೋಕಸಭಾ ಚುನಾವಣೆವರೆಗೂ ಮತದಾರರ ಸೇರ್ಪಡೆಯಾದರೆ ಅಲ್ಪಸಂಖಾತರ ಮತಗಳೇ 7 ಲಕ್ಷ ಸಮೀಪಿಸುತ್ತದೆ.
ಕ್ರಿಶ್ಚಿಯನ್ ಮಂದಿ ಹೇಗೂ ಕಾಂಗ್ರೆಸ್ ಮತದಾರರೇ ಆಗಿದ್ದು, ಕಾಂಗ್ರೆಸ್’ನಲ್ಲಿ ಗುರಿಸಿಕೊಂಡಿರುವ ಬಿಲ್ಲವರು, ಬಂಟರು, ದಲಿತ ಸಮುದಾಯಗಳ ಮಂದಿಯೂ 3 ಲಕ್ಷಕ್ಕೂ ಹೆಚ್ಚಿದ್ದು ಈ ಮತಗಳು ಪರಿಪೂರ್ಣವಾಗಿ ಚಲಾವಣೆಯಾದಲ್ಲಿ ಕಾಂಗ್ರೆಸ್ ಗೆಲುವು ಸನ್ನಿಹಿತ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದವರನ್ನು ಹೊರತುಪಡಿಸಿದರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರೇ ಅಧಿಕ ಇದ್ದಾರೆ. ಕಳೆದ ಚುನಾವಣೆಗಳಲ್ಲಿ ಮುಸ್ಲಿಂ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾಗಿಲ್ಲ ಎಂಬ ವಿಶ್ಲೇಷಣೆ ನಡೆದಿದಿದ್ದು, ಅದರ ಆಧಾರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎಲ್ಲಾ ಮುಸ್ಲಿಮರು ಮತ ಚಲಾಯಿಸಬಹುದು ಎಂಬುದೂ ಲೆಕ್ಕಾಚಾರ. ಹಾಗಾಗಿ ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಆ ಸಮುದಾಯದವರಿಗೆ ಟಿಕೆಟ್ ಕೊಡುವ ಯೋಚನೆ ‘ಕೈ’ ನಾಯಕರಿಗಿತ್ತು. ಇನಾಯತ್ ಆಲಿ, ಯು.ಟಿ.ಇಫ್ತಿಕಾರ್ ಹೆಸರು ಕೇಳಿ ಬರುತ್ತಿತ್ತಾದರೂ ಇದೀಗ ಸ್ಪೀಕರ್ ಯು.ಟಿ.ಖಾದರ್ ಹೆಸರು ಮುನ್ನೆಲೆಗೆ ಬಂದಿದೆ. ಸೋಲಿಲ್ಲದ ಸರದಾರ ಯು.ಟಿ.ಖಾದರ್ ಅವರಿಗೆ ಕೊಟ್ಟರೆ ಜಯ ನಿಶ್ಚಿತ ಎಂಬ ಅಭಿಪ್ರಾಯ ಹಲವರದ್ದು. ಹಾಗಾಗಿ ಅಂತಿಮ ಕ್ಷಣದಲ್ಲಿ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.