ದೆಹಲಿ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಗರಿಗೆದರಿದೆ. ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಬಿರುಸುಗೊಂಡಿದ್ದು, ಯೋಗಿಯ ಮಾಡಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ಹುರಿಯಾಳುಗಳ ಪರವಾಗಿ ಭರ್ಜರಿ ಮತಬೇಟೆಯಲ್ಲಿ ತೊಡಗಿರುವ ಅವರು, ಎಸ್‌ಪಿ-ಬಿಎಸ್‌ಪಿ ನಾಯಕರನ್ನು ಕಮಲ ಪಕ್ಷಕ್ಕೆ ಕರೆತರುವ ಮೂಲಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
ಸಮಾಜವಾದಿ ಪಕ್ಷದ ಅನೇಕ ನಾಯಕರು ಆ ಪಕ್ಷದ ಬಗ್ಗೆ ಮುನಿಸಿಕೊಂಡಿದ್ದು, ಇಂದು ಸಿಧೌಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮನೀಶ್ ರಾವತ್ ಮತ್ತು ಹಮೀರ್‌ಪುರ ವಿಧಾನಸಭಾ ಕ್ಷೇತ್ರದ ಮಾಜಿ ಎಸ್‌ಪಿ ಅಭ್ಯರ್ಥಿ ಡಾ ಮನೋಜ್ ಕುಮಾರ್ ಪ್ರಜಾಪತಿ ಲಕ್ನೋದಲ್ಲಿ ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಮತ್ತು ಉತ್ತರ ಪ್ರದೇಶ ಚುನಾವಣಾ ಸಹ ಪ್ರಭಾರಿ ಶೋಭಾ ಕರಂದ್ಲಾಜೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಉತ್ತರ ಪ್ರದೇಶದ ಮಾಜಿ ರಾಜ್ಯ ಸಚಿವ ಮತ್ತು ಭದೋಹಿ ಅಸೆಂಬ್ಲಿ ಕ್ಷೇತ್ರದ ಬಿಎಸ್‌ಪಿ ಶಾಸಕ ಶ್ರೀ ರಂಗನಾಥ್ ಮಿಶ್ರಾಯವರು ಕೂಡಾ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರಲ್ಲಿ ಒಬ್ಬರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಭಾವಶಾಲಿ ಆಡಳಿತದಿಂದಾಗಿ ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ, ಬಿಜೆಪಿ ವರ್ಚಸ್ಸು ರಾಜ್ಯಾದ್ಯಂತ ಹೆಚ್ಚುತ್ತಿದೆ, ಮುಂಬರುವ ವಿಧಾನಸಭಾ ಚುನವಣೆಯಲ್ಲಿ ಬಿಜೆಪಿ ನಿಚ್ಚಳ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.