ಬೆಂಗಳೂರು: ಕೊರೋನಾ ಸೋಂಕು ತಡೆ ಸಂಬಂಧ ರಾಜ್ಯದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ನಿಯಮ ಸಡಿಲವಾಗುತ್ತಿದೆ. ಇದೀಗ ಅನ್‌ಲಾಕ್ 3.0 ಮೂಲಕ ಶಾಪಿಂಗ್ ಮಾಲ್, ಮಾರ್ಕಟ್ ಸಹಿತ ವಾಣಿಜ್ಯೋದ್ಯಮ ಕ್ಷೇತ್ರಗಳು ಫುಲ್ ಓಪನ್. ಆದರೆ ದೇವಾಲಯಗಳಿಗೆ ಕಾಯಕಲ್ಪ ಸಿಕ್ಕಿಲ್ಲ. ಈ ಬಗ್ಗೆ ಅರ್ಚಕ ವಲಯದ ಪ್ರಮುಖರು ಹಾಗೂ ಧಾರ್ಮಿಕ ಪಂಡಿತರು ಬೇಸರ ಹೊರಹಾಕಿದ್ದಾರೆ.
‘ಸಂಕಟ ಬಂದಾಗ ವೆಂಕಟರಮಣ’ ಎಂಬುದು ಗಾದೆ ಮಾತಿಗಷ್ಟೇ ಸೀಮಿತವಲ್ಲ. ಸಂಧಿಕಾಲದಲ್ಲಿ ಕೃಪೆ ತೋರುವವನು ಭಗವಂತ ಮಾತ್ರ ಎಂಬ ಗುರುವಾಣಿ ಸರ್ವಕಾಲದಲ್ಲೂ ಸೂಕ್ತ ಎಂಬುದು ಧಾರ್ಮಿಕ ಕ್ಷೇತ್ರಗಳ ಹಿರಿಯರು ಹೇಳಿಕೊಂಡಿದ್ದಾರೆ.
ಹೀಗಿದ್ದರೂ ಆಸ್ತಿಕ ಜಗತ್ತಿಗೆ ಶಕ್ತಿ ತುಂಬುವ ಸರ್ಕಾರ ಪ್ರಸ್ತುತ ದೇವಾಲಯಗಳ ಕಾಯಕಲ್ಪಕ್ಕೆ ಮುಂದಾಗಿಲ್ಲವೇಕೆ ಎಂದು ಅರ್ಚಕರ ಸಮೂಹ ಪ್ರಶ್ನಿಸಿದೆ. ಅನ್‌ಲಾಕ್ 3.0 ಸಂದರ್ಭದಲ್ಲಿ ಮಾರುಕಟ್ಟೆ ಸಂಪೂರ್ಣ ತೆರೆಯು ಅವಕಾಶ ಸಿಕ್ಕಿದೆ. ಶಾಪಿಂಗ್ ಮಾಲ್ ಸಹಿತ ವಾಣಿಜ್ಯೋದ್ಯಮ ಕ್ಷೇತ್ರಗಳೂ ಪರಿಪೂರ್ಣ ಕಾರ್ಯಾರಂಭಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ‘ಅನ್ನಪೂರ್ಣೆ’ಯ ಕೈಂಕರ್ಯಕ್ಕೆ ಅವಕಾಶ ನೀಡದಿರುವುದು ಸರಿಯಲ್ಲ ಎಂಬುದು ಈ ಧಾರ್ಮಿಕ ಶ್ರೇಷ್ಠರ ಅಭಿಪ್ರಾಯ.
ಲಾಕ್‌ಡೌನ್ ಜಾರಿಯಲ್ಲಿದ್ದಾಗಲೂ ಪೂಜಾ ವಿಧಿವಿಧಾನಗಳು ನಡೆಯುತ್ತಿತ್ತಾದರೂ ಭಕ್ತರಿಗೆ ದೇಗುಲ ಪ್ರವೇಶಾವಕಾಶ ಇರಲಿಲ್ಲ. ಇದೀಗ ಅನ್‌ಲಾಕ್ ಕ್ರಮದಿಂದಾಗಿ ಭಕ್ತರಿಗೆ ದೇವರ ದರ್ಶನದ ಅವಕಾಶವಷ್ಟೇ ಸಿಗಲಿದೆ. ಪೂಜೆ, ಸೇವೆ, ಹೋಮ-ಹವನದ ಕೈಂಕರ್ಯಗಳಿಗೆ ಅವಕಾಶ ಇಲ್ಲ. ತೀರ್ಥ ಪ್ರಸಾದಕ್ಕೂ ಅವಕಾಶ ನೀಡಿಲ್ಲ. ಸರ್ಕಾರದ ಈ ನಡೆಯೇ ಅರ್ಚಕರ ಅಸಮಾಧಾನಕ್ಕೆ ಕಾರಣವಾಗಿರುವುದು.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತ ಆಸ್ರಣ್ಣ, ದೇಗುಲದ ವಿಚಾರದಲ್ಲಿ ಸರ್ಕಾರದ ಬಗ್ಗೆಯಾಗಲೀ, ಸರ್ಕಾರವನ್ನು ಮುನ್ನಡೆಸುವವರ ವಿಚಾರದಲ್ಲಿ ಆಕ್ರೋಶ ಬೇಡ ಎಂದು ಕಿವಿಮಾತು ಹೇಳಿದ್ದಾರೆ. ಆದರೆ, ಲೋಕಹಿತ ಬಯಸುವ ಆಸ್ತಿಕರ ಮನಸ್ಸಿಗೆ ನೋವಾಗುವ ರೀತಿ ಸರ್ಕಾರವೂ ನಡೆದುಕೊಳ್ಳಬಾರದು ಎಂದಿದ್ದಾರೆ.
https://youtu.be/W3n03TWSZgI
ಶ್ರೀ ಕ್ಷೇತ್ರ ಕಟೀಲು – ಪೂಜಾ ವೈಭವದ ಸನ್ನಿವೇಶ
ರಾಜ್ಯದ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ನೆರವೇರಿಸಲು ಭಕ್ತರಿಗೆ ಇನ್ನೂ ಅವಕಾಶ ಸಿಗದಿರುವ ಕುರಿತು ಸಾರ್ವಜನಿಕ ಕ್ಷೇತ್ರದಲ್ಲಿ ವ್ಯಕ್ತವಾಗಿರುವ ಕುರಿತು ಉದಯ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಅನಂತ ಆಸ್ರಣ್ಣ ಅವರು, ಪ್ರಜೆಗಳಿಗಷ್ಟೇ ಅಲ್ಲ, ಪ್ರಭುವಿಗೂ ಒಳಿತಾಗಬೇಕಾದರೆ, ಸಮಸ್ತ ಲೋಕಕ್ಕೆ ಒಳಿತಾಗಬೇಕಾದರೆ ಪೂಜೆ ಪುನಸ್ಜಾರಕ್ಕೆ ಅಡ್ಡಿಯಾಗಬಾರದು ಎಂದರು. ಭಕ್ತ ಕೋಟಿಯ ಆಶಯಕ್ಕೆ ಒಪ್ಪಿಕೊಂಡರೆ ಪ್ರಧಾನಿ, ಸಿಎಂ, ಸಚಿವರ ಸಹಿತ ಪ್ರಭುಗಳ ಸ್ಥಾನದಲ್ಲಿರುವವರಿಗೇ ಒಳ್ಳೆಯದು ಎಂದವರು ಹೇಳಿದರು.
ಸೇವೆ-ಯಜ್ಞಕ್ಕೆ ಅವಕಾಶ ನೀಡಿ:
ಇದೇ ವೇಳೆ, ಯಾವುದೇ ಪೂಜೆ ಪ್ರಾರ್ಥನೆಗಳಿರಲಿ ತೀರ್ಥ-ಪ್ರಸಾದಗಳ ಹೊರತಾಗಿ ಕೈಂಕರ್ಯ ಪರಿಪೂರ್ಣವಾಗದು ಎಂಬುದು ಪುರೋಹಿತ ವರ್ಗದ ಪ್ರತಿಪಾದನೆ. ಅದರಲ್ಲೂ ಜನರು ಪುನೀತರಾಗಲು ದೇಗುಲಗಳಿಗೆ ಭೇಟಿ ನೀಡುವುದು. ತೀರ್ಥ-ಪ್ರಸಾದ ಸ್ವೀಕರಿಸಿದರೆ ಮಾತ್ರ ಕಷ್ಟ ಕಾರ್ಪಣ್ಯಗಳು ದೂರವಾಗುವ ಇಷ್ಟಾರ್ಥ ಸಿದ್ದಿಯಾಗುವುದು ಎಂಬುದು ನಂಬಿಕೆ. ಹಾಗಾಗಿ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರ, ಸೇವೆ-ಹೋಮ-ಹವನ, ತೀರ್ಥ-ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡಬೇಕದು ಧಾರ್ಮಿಕ ಪಂಡಿತರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.