ಬೆಂಗಳೂರು: ಕೊರೋನಾ ಸೋಂಕು ತಡೆಗೆ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿದ್ದು ಇದೀಗ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವುದರಿಂದ ಲಾಕ್‌ಡೌನ್ ತೆರವಿಗೆ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ಸಂಪುಟ ಸದಸ್ಯರು ಸುದೀರ್ಘ ಕಸರತ್ತು ನಡೆಸಿದರು. ವಿವಿಧ ಜಿಲ್ಲೆಗಳ ಡಿಸಿಗಳ ಜೊತೆ ಸಮಾಲೋಚಿಸಿದ ನಂತರ ಸಂಜೆ ಸಚಿವರ ಜೊತೆ ಸಭೆ ನಡೆಸಿದರು. ಅನೇಕ ಡಿಸಿಗಳು ತಮ್ಮ ಜಿಲ್ಲೆಗಳಲ್ಲಿ ಲಾಕ್‌ಡೌನ್ ಇನ್ನಷ್ಟು ದಿನ ಜಾರಿಯ ಅಗತವಿದೆ ಎಂದು ಸಿಎಂ ಅವರ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಏಕಾಏಕಿ ಲಾಕ್‌ಡೌನ್ ತೆರವು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಅನುಸರಿಸಲು ಸಿಎಂ ತೀರ್ಮಾನಿಸಿದರು.
ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್ ಕಠಿಣ ನಿಯಮ ಜೂನ್ 14ರ ವರೆಗೂ ಜಾರಿಯಲ್ಲಿರಲಿದ್ದು ಅನಂತರ ಹಂತಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಸಿಎಂ ತೀರ್ಮಾನಕ್ಕೆ ಬಂದಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮೈಸೂರು, ಮಂಗಳೂರು, ಬೆಂಗಳೂರು ಗ್ರಾಮಾಂತರ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಚಾಮರಾಜನಗರ, ಹಾಸನ, ಬೆಳಗಾವಿ, ಕೊಡಗು ಸಹಿತ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದೆ ಎಂದು ಘೋಷಿಸಿದರು.
ಇನ್ಬುಳಿದ ಜಿಲ್ಲೆಗಳಲ್ಲಿ ಅನ್ಲಾಕ್ ಮಾಡಲಾಗಿದೆ ಎಂದು ಸಿಎಂ ಪ್ರಕಟಿಸಿದರು. ಇದೇ ವೇಳೆ ಅಗತ್ಯ ಸಂಗತಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಅನ್‌ಲಾಕ್ ಆಗುತ್ತಿರುವ ಜಿಲ್ಲೆಗಳಲ್ಲಿ ಏನಿರುತ್ತೆ? ಏನಿರಲ್ಲ..? ಇಲ್ಲಿದೆ ಮಾಹಿತಿ
- 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮ ಮುಂದುವರಿಕೆ.
- ಜೂನ್ 21ರ ವರೆಗೆ ಈ ನಿಯಮ ಜಾರಿ.
- ಕಾರ್ಖಾನೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸಕ್ಕೆ ಅನುಮತಿ.
- ನಿರ್ಮಾಣ ಕ್ಷೇತ್ರದ ಚಟುವಟಿಕೆಗಳಿಗೆ ಅವಕಾಶ.
- ಶೇ.30ರಷ್ಟು ಸಿಬ್ಬಂದಿಯೊಂದಿಗೆ ಗಾರ್ಮೆಂಟ್ ಫ್ಯಾಕ್ಟರಿ ಆರಂಭಕ್ಕೆ ಅನುಮತಿ.
- ರಾತ್ರಿ 8ಗಂಟೆಯಿಂದ ಬೆಳಿಗ್ಗೆ 5ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತೆ.
- ಶುಕ್ರವಾರ ಸಂಜೆಯಿಂದ ಸೋಮಚಾರ ಬೆಳಿಗ್ಗೆವರೆಗೆ ವೀಕೆಂಡ್ ಕರ್ಫ್ಯೂ..
- ಬೆಂಗಳೂರು ಸಹಿತ ಅನ್‌ಲಾಕ್ ಆಗುತ್ತಿರುವ ನಗರಗಳಲ್ಲಿ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಗ್ರೀನ್ ಸಿಗ್ನಲ್.
- ಕೆಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಸಹಿತ ಸಮೂಹ ಸಾರಿಗೆ ಬಸ್ ಸಂಚಾರಕ್ಕೆ ನಿರ್ಬಂಧ.
- ಬೆಂಗಳೂರಿನಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಆರಂಭಕ್ಕೆ ಅನುಮತಿ.
- ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2 ಗಂಟೆವರೆಗೂ ಅವಕಾಶ.
- ಬೀದಿ ಬದಿ ವ್ಯಾಪಾರಗಳಿಗೆ ಅವಕಾಶ.
- ಪಾರ್ಕ್‌ಗಳನ್ನು ಬೆಳಿಗ್ಗೆ 10ಗಂಟೆವರೆಗೆ ತೆರೆಯಲು ಅವಕಾಶ.
- ಬಾರ್, ರೆಸ್ಟೋರೆಂಟ್, ವೈನ್ ಸ್ಟೋರ್‌ಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗ ಖರೀದಿಗೆ ಅವಕಾಶ