ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ಇದೀಗ ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗುತ್ತಿದ್ದಾರೆ.
ಲಂಡನ್: ಒಂದೊಮ್ಮೆ ಜಗತ್ತನ್ನೇ ಆಳಿದ ಬ್ರಿಟಿಷ್ ಪಾಳಯದ್ದೀಗ ಆಡಳಿತಗಾರರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯೇ ಇಲ್ಲ ಎಂಬಂತಿದೆ. ಶತಮಾನದ ಹಿಂದೆ ಭಾರತವನ್ನಾಳಿದ ಬ್ರಿಟನ್‌ನ್ನು ಇದೀಗ ಭಾರತೀಯನೊಬ್ಬ ಆಳುವ ಸ್ಥಿತಿ ಎದುರಾಗಿದೆ.
ಕೆಲವು ದಿನಗಳ ಅನಿರೀಕ್ಷಿತ ರಾಜಕೀಯ ತಿರುವು ಅಲ್ಲಿ ಭಾರತೀಯ ಸಂಜಾತ ರಿಷಿ ಸುನಕ್ ಅವರು ಪ್ರಧಾನಿ ಪಟ್ಟ ಏರುವ ಅವಕಾಶ ಕಲ್ಪಿಸಿದೆ. ಬ್ರೆಕ್ಸಿಟ್ ನಿರ್ವಹಣೆ ವೈಫಲ್ಯದಿಂದ ಸ್ವಪಕ್ಷೀಯರ ವಿರೋಧಕ್ಕೆ ಒಳಗಾಗಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದರು. ನಂತರ ಆಯ್ಕೆಯಾದ ಲಿಸ್ ಟ್ರಸ್ ಕೂಡಾ ದೇಶದ ಆರ್ಥಿಕ ಪರಿಸ್ಥಿತಿ ನಿಯಭಾಯಿಸಲಾಗದೆ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದಾರೆ. ಅವರ ರಾಜೀನಾಮೆಯಿಂದಾಗಿ ತೆರವಾಗಿರುವ ಸ್ಥಾನವನ್ಬು ರಿಷಿ ಸುನಕ್ ತುಂಬಲಿದ್ದಾರೆ.
ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಬ್ರಿಟನ್‌ನಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಮೂವರು ಪ್ರಧಾನಿಗಳು ಅಧಿಕಾರವಹಿಸಿಕೊಂಡು ಕೆಲಸಮಯದಲ್ಲೇ ರಾಜೀನಾಮೆ ನೀಡಿದ್ದರು. ಏಳು ಸಚಿವರೂ ಪದತ್ಯಾಗ ಮಾಡಿದ್ದು ಈ ಬೆಳವಣಿಗೆಯು ಅಲ್ಲಿನ ಕಠಿಣ ಪರಿಸ್ಥಿತಿಯನ್ನು ಜಗತ್ತಿಗೇ ಅನಾವರಣ ಮಾಡಿದಂತಿತ್ತು. ಈ ಕಠಿಣ ಪರಿಸ್ಥಿತಿಯನ್ನು ರಿಷಿ ಸುನಕ್ ಅವರು ಹೇಗೆ ನಿರ್ವಹಿಸಬಲ್ಲರು ಎಂಬುದೇ ಕುತೂಹಲ..
















































