- ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಕಟೀಲು
ಡಿಸೆಂಬರ್ 31 ರಾತ್ರಿ ಯಾರೂ ಮನೆಯಲ್ಲಿಲ್ಲ. ಎಲ್ಲೋ ಹೊರಗೆ ಇರುವುದು. ಮದ್ಯವ್ಯಸನದಿಂದ ಅಮಲೇರಿಸಿ ಕುಣಿಯುವುದು.. ಎಲ್ಲಾ ದಿನ ಮಲಗಿರುವವವರೂ ಅದೊಂದುದಿನ ನಿದ್ದೆಮಾಡದೇ ಎದ್ದಿರುವುದು. ಮನೆಯಲ್ಲಿ ತಾಯಿತಂದೆಗೆ ಚಿಂತೆ ಕೊಡುವ ದಿನವದು. ಮಗ ಇನ್ನೆಲ್ಲಿ ಕುಡಿದು ಎಲ್ಲೋ ಬಿದ್ದುಕೊಂಡು ಅನರ್ಥಮಾಡಿಕೊಳ್ಳುತ್ತಾನೋ ಎಂದುಕೊಳ್ಳುವ ದಿನವದು. ಕೆಲವರು ಕುಡಿದ ಅಮಲಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗುವರೇ ಎಂಬ ಆತಂಕದ ದಿನವದು. ಕುಡಿದ ಅಮಲಿನಲ್ಲಿ ಜಗಳ ಕಾಯುವ ದಿನವಿರಬಹುದು. ಕೆಲವರು enjoyment ನೆಪದಲ್ಲಿ ಕುಡಿಯುವ ಚಟ ಆರಂಭಿಸುವ ದಿನವದು. ಮರುದಿನ ಅವಘಡಗಳ ಬಗ್ಗೆಯೇ ವಾರ್ತಾಪತ್ರಿಕೆಯಲ್ಲಿ ಕಾಣುವ ದಿನ..?
‘ಹೊಸವರ್ಷ’ವೆಂದು ಕರೆಯಲ್ಪಡುವ ಮೊದಲ ದಿನವೇ ಇಡೀವರ್ಷದಲ್ಲಿ ಅತ್ಯಂತ ಕೆಟ್ಟ ದಿನವಾದರೆ ಹೇಗೆ? ಹಾಗಾದರೆ Happy New Year ಹೇಳುವುದರಲ್ಲಿ ಅರ್ಥವಿದೆಯೇ? ಎಂದು ಹಲವರ ಅಭಿಮತವೂ ಹೌದು.
ಆದರೆ, ಭಾರತೀಯ ಪರಂಪರೆಯಲ್ಲಿ ಅದರಲ್ಲೂ ಸನಾತನ ಸಂಸ್ಕೃತಿಯಲ್ಲಿ ಹೊಸ ವರ್ಷದ ಆರಂಭದ ಸನ್ನಿವೇಶವೇ ವಿಭಿನ್ನ. ‘ಯುಗಾದಿಯೇ ಹೊಸ ವರ್ಷ’..! ಇದು ಹೇಗೆ? ಎನ್ನುವುದು ಪ್ರಶ್ನೆಯಾದರೆ ಉತ್ತರವೂ ನಮ್ಮಲ್ಲಿದೆ. ವರ್ಷಕ್ಕೆ ಮುನ್ನೂರ ಅರುವತ್ತೈದೂ ಕಾಲು ದಿನ ಎಂದು ಕಂಡು ಹಿಡಿದ ಭಾರತ ನಮ್ಮದು. ಸೌರಮಾನದ ಕ್ರಮದಲ್ಲಿ ವರ್ಷವನ್ನು ಹನ್ನೆರಡುಮಾಸಗಳಾಗಿ ವಿಂಗಡಿಸಿ ಅದನ್ನು ಜಗತ್ತಿಗೆ ಸರಿಯಾಗಿ ಖಗೋಳದಲ್ಲಿ ತೋರಿಸಿಕೊಟ್ಟು ಕರಾರುವಾಕ್ಕಾಗಿ ಸಾಧಿಸಲ್ಲಪಟ್ಟದ್ದು .
ಅದಕ್ಕಿಂತ ಮೊದಲು ಕ್ರಿಶ್ಚಿಯನ್ನರು ಹತ್ತು ತಿಂಗಳ ವರ್ಷ ಅನುಸರಿಸುತ್ತಿದ್ದರಂತೆ. ಉಳಿದಂತೆ ವಿಂಟರ್ ಎನ್ನುತ್ತಿದ್ದರು. ಭಾರತದಲ್ಲಿ ಋತುಮಾನವನ್ನು ಅನುಸರಿಸಿಯೇ ಕರಾರುವಾಕ್ಕಾಗಿ ಮಳೆಗಾಲ ಚಳಿಗಾಲ ಸೆಖೆಗಾಲ ಅನುಕ್ರಮವಾಗಿ ಬರುವುದನ್ನು ಗಮನಿಸಿ ರೋಮ್ ನಲ್ಲಿ ನಿರ್ಧಾರವಾಗಿ (ಸುಮಾರು ಕ್ರಿಸ್ತಶಕ 1592) ಜನವರಿ ಮತ್ತು ಫೆಬ್ರವರಿ ಮಾಸವು ಸೇರಿಸಿದರು. ಮತ್ತೆ ಮುನ್ನೂರೈವತ್ತೈದೂ ಕಾಲು ದಿನಕ್ಕೆ ಸರಿದೂಗಿಸಲು ನಾಲ್ಕುವರ್ಷಕ್ಕೊಮ್ಮೆ ಫೆಬ್ರವರಿಮಾಸದಲ್ಲಿ 29 ನೇ ತಾರೀಖು ಸೇರಿಸಿ ಹೊಂದಿಸಿದರು. ಇದು ಪೋಪ್ ಗ್ರೆಗರಿ ಕಾಲದಲ್ಲಿ ನಡೆದದ್ದರಿಂದ ಈ ಇಂಗ್ಲೀಷ್ ಕ್ಯಾಲೆಂಡರ್ ಗೆ ಗ್ರೆಗೆರಿಯನ್ ಕ್ಯಾಲೆಂಡರ್ ಎಂದು ಹೆಸರಾಯಿತು. ಮುಸ್ಲಿಮರು ಇಂದಿಗೂ ಹನ್ನೊಂದುಮಾಸಗಳ ವರ್ಷವನ್ನೇ ಆಚರಿಸುವುದರಿಂದ ಪ್ರತಿ ಹನ್ನೊಂದು ತಿಂಗಳಿಗೊಮ್ಮೆ ರಂಜಾನ್ ಮಾಸ ಆಚರಿಸುವುದನ್ನು ಗಮನಿಸುತ್ತಿದ್ದೇವೆ. ಇದು ಧಾರ್ಮಿಕ ಆಚರಣೆಯಾಗಿ ಅರ್ಥಪೂರ್ಣ ಎಂಬುದರಲ್ಲಿ ಎರಡು ಮಾತಿಲ್ಲ.
ಭಾರತದ ಸನಾತನ ಧರ್ಮದಲ್ಲಿ ಆಚರಣೆ ಹೀಗಿದೆ:

ಹಿಂದಿನಿಂದಲೂ ಕರಾರುವಾಕ್ಕಾದ ದಿನಚರಿ ನಮ್ಮಲ್ಲಿತ್ತು. ದಿನದ ಬದಲಾವಣೆ ಸೂರ್ಯೋದಯಕ್ಕೆಂದು ನಿಗದಿಯಾಗಿತ್ತು. ರಾತ್ರಿ ಹನ್ನೆರಡು ಗಂಟೆಗೆ ದಿನಬದಲಾಗುವುದು ಮಾತ್ರ ನಮಲ್ಲಿರಲಿಲ್ಲ/ಇಲ್ಲ. ಮನಸ್ಸು ಮಾಡಿದರೆ ನಾವು ಬದಲಾದೇವು. ಲೋಕದ ವ್ಯವಸ್ಥೆ ಮಾತ್ರ ಯಾವಕಾರಣಕ್ಕೂ ಬದಲಾಗಲು ಸಾಧ್ಯವಿಲ್ಲವಲ್ಲ. ಹಾಗಿರುವಾಗ ರಾತ್ರಿ ದಿನ ಬದಲಾಗುವುದು ಹೇಗೆ ಸಾಧ್ಯ? ಜ್ಯೋತಿಷ್ಯ ಶಾಸ್ತ್ರದಂತೆ ಸೂರ್ಯೋದಯಕ್ಕೆ ಯಾವ ದ್ರೇಕ್ಕಾಣವಿರುತ್ತದೋ ಅದು ಆ ದಿನ ಆ ವಾರ. ಹಾಗಾಗಿ ಆದಿತ್ಯವಾರದಿಂದ ಸೋಮವಾರಕ್ಕೆ ವಾರ ಬದಲಾಗುವುದು ಸೂರ್ಯನ ಗತಿಗನುಸಾರವಾಗಿ. ಸೂರ್ಯ ಉದಯದ ಸಮಯವೇ ದಿನ ಬದಲಾವಣೆಗೆ ಸಮಯವೇ ವಿನಾ ರಾತ್ರಿ ಹನ್ನೆರಡುಗಂಟೆಗೆ ದಿನಬದಲಾಗುವುದಿಲ್ಲ ಎಂದು ಸಾರಿದ ದೇಶ ನಮ್ಮದು.
ಶಾಲೆಯಲ್ಲಿ ಓದಿದ್ದನ್ನಾದರೂ ಮೆಲುಕುಹಾಕೋಣ. ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿಬರುತಿದೆ. ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತಿದೆ.’ ಇದನ್ನರಿತಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಹೀಗಾಬಾರದೆಂದೇ ಒಳ್ಳೆ ಸಂಪ್ರದಾಯ ಉಳಿಯಬಾರದೆಂದೇ ಈ ಪಠ್ಯ ಈಗ ಪಾಠಪುಸ್ತಕದಿಂದ ಕಿತ್ತೆಸೆದಿದ್ದಾರೆ ಕನ್ನಡದ ನವೀನ ಕಣ್ಮಣಿಗಳು.
ಯುಗಾದಿಗೆ ಹೊಸವರ್ಷವೆಂಬ ಕಲ್ಪನೆಯ ಒಳ್ಳೆಯ ಆಚರಣೆ ನಮ್ಮದು. ಹಿಂದಿನ ದಿನ ದೇವರ ಮುಂದೆ ಕಣಿ ಇಡಬೇಕು. ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಸೌತೆಕಾಯಿ, ವೀಳ್ಯದೆಲೆ, ಅಡಿಗೆ, ಹಿಂಗಾರ, ಫಲವಸ್ತುಗಳು, ಕನ್ನಡಿ ಮತ್ತು ಮನೆಯೊಡತಿಯ ಒಂದು ಆಭರಣ ದೇವರ ಮುಂದೆ ಇಟ್ಟು ಮಲಗುವುದು (ಇದು ನಮ್ಮಲ್ಲಿನ ಕ್ರಮ.ಪ್ರಾದೇಶಿಕವಾಗಿ ಬದಲಾವಣೆಗಳಿವೆ), ಮರುದಿನ ಮುಂಜಾನೆ ಎದ್ದು ನಮ್ಮ ತಾಯಿ, ಕಣ್ಣುಬಿಡಬೇಡ ಎಂದು ಹೇಳುತ್ತಾ ಮಕ್ಕಳ ಕೈಹಿಡಿದು ದೇವರಕೋಣೆಗೆ ಕರೆತಂದು ದೇವರಿಗೆ ನಮಸ್ಕರಿಸಿ ಕಣ್ಣುಬಿಡಲು ಹೇಳುತ್ತಾರೆ. ದೇವರನ್ನು ನೋಡಿ ನಂತರ ಈ ಮಂಗಲದ್ರವ್ಯಗಳನ್ನು ನೋಡಿ, ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿದ ನಂತರ ಮಾತೃದೇವೋಭವ , ಪಿತೃದೇವೋ ಭವ, ಎಂದು ತಂದೆ-ತಾಯಿಗೆ ನಮಸ್ಕರಿಸಿ ಸ್ನಾನಮಾಡಿ ಹೊಸಬಟ್ಟೆ ಉಟ್ಟು ಮನೆಯ ಹಿರಿಯರಿಗೆಲ್ಲ ಅಭಿವಂದಿಸಿ ಆಶೀರ್ವಾದ ಪಡೆದು ಪಾಯಸದ ಊಟಮಾಡುವ ದಿನ ಇದು.
ಕನಿಷ್ಟ ಒಂದು ದಿನವಾದರೂ ಪಂಚಾಂಗ ಪಠಿಸುವ ದಿನವಿದು. ಕಾಲನಿರ್ಣಯಗಳನ್ನು ಸರಿಯಾಗಿ ತಿಳಿದರೆ ಪಂಚಾಂಗಗಳನ್ನು ತಿಳಿದರೆ ಶ್ರೇಯಸ್ಸಾಗುತ್ತದೆ ಎಂದು ಸಾರುವ ದಿನವಿದು. ಇಡೀ ಮನೆಯಲ್ಲಿ ಸಂತಸದ ವಾತಾವರಣ ತುಂಬುವ ದಿನವಿದು. ಸಂಬಂಧಗಳನ್ನು ಬೆಸೆದು ಗಟ್ಟಿಯಾಗಿಸುವ ದಿನವಿದು. ಆ ದಿನ ಸಾಲ ಮಾಡಕೂಡದು ಎಂಬ ಎಚ್ಚರಿಕೆಯ ಮಾತುಬೇರೆ. ಚಟಗಳಿಂದ ದೂರವಿರಬೇಕೆಂಬ ಗಂಭೀರದ ಆಜ್ಞೆಗಳು ಬೇರೆ. ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸಬೇಕೆಂದು ಬೇವುಬೆಲ್ಲಗಳೆರಡನ್ನೂ ಪೂಜಿಸಿ ಭುಂಜಿಸುವ ಸುಂದರಬದುಕಿನ ಪಾಠಕಲಿಸುವ ದಿನವಿದು. ಎಂತಹ ಒಳ್ಳೆಯ ಕ್ರಮ. ಹೊಸದಿನ ಶುಭದಿನ ಎನ್ನುವುದು ಸಾರ್ಥಕದ ಮಾತು. ಎಲ್ಲ ದಿನವೂ ಶುಭದಿನವಾಗಿರಲಿ ಎನ್ನುವುದು ಅದರೊಳಗಿನ ಧ್ವನಿ.
ಚಾಂದ್ರಮಾನ ಯುಗಾದಿ ಚೈತ್ರಮಾಸದ ಆರಂಭದ ದಿನ. ಅದು ಈ ವರ್ಷ ಮಾರ್ಚ್ 19. ಚಂದ್ರ ಕಳೆದ ವರ್ಷದ ಚೈತ್ರ ಮಾಸದಿಂದ ಆರಂಭಿಸಿ 12 ತಿಂಗಳು ಅಂದರೆ ಫಾಲ್ಗುಣ ಮಾಸದ ಅಮಾವಾಸ್ಯೆ ವರೆಗಿನ 12 ತಿಂಗಳು ಮುಗಿಸಿ ಪುನಃ ಒಂದು ವರ್ಷ ಪೂರೈಸಿ ಮುಂದಿನ ಚೈತ್ರಮಾಸಕ್ಕೆ ಕಾಲಿಡುವ ದಿನ. ಆರು ಋತುಗಳ ಒಂದು ಚಕ್ರ ಮುಗಿದು ಪುನಃ ವಸಂತ ಋತು ಆರಂಭವಾಗುವ ದಿನ. ಪ್ರತಿ ಅಮಾವಾಸ್ಯೆಯು ತಿಂಗಳ ಕೊನೆಯಾಗಿ ನಂತರದ ಮಾಸ ಬರುವುದು ಈ ಕ್ರಮದ ಪದ್ಧತಿ. ( ಉತ್ತರಭಾರತದಲ್ಲಿ ಗೋದಾವರೀ ನದಿಯ ಮೇಲ್ಭಾಗದಲ್ಲಿ ಹುಣ್ಣಿಮೆಗೆ ಬದಲಾಗುತ್ತದೆ). ಈ ವರ್ಷ ಎಪ್ರೀಲ್ 15 ಸೌರಮಾನ ಯುಗಾದಿ. ಮೇಷಾದಿ ದ್ವಾದಶ ಮಾಸ ಮುಗಿದು ಪುನಃ ಮೇಷ ಮಾಸ ಆರಂಭವಾಗುವ ದಿನ. ಈ ಕ್ರಮದಲ್ಲಿ ಸಂಕ್ರಾಂತಿಯಿಂದ ಸಂಕ್ರಾಂತಿಗೆ ಒಂದು ತಿಂಗಳು ದಾಟುತ್ತದೆ. ಒಂದೊಮ್ಮೆ ಸಂಕ್ರಾಂತಿಯಿಂದ ಸಂಕ್ರಾಂತಿ ಮಧ್ಯೆ ಎರಡು ಅಮಾವಾಸ್ಯೆ ಬಂದಲ್ಲಿ ಆಗ ಒಂದು ಚಾಂದ್ರಮಾಸದಲ್ಲಿ ಅಧಿಕಮಾಸ ಸೇರ್ಪಡೆಯಾಗಿ ಆ ವರ್ಷ ಹದಿಮೂರು ಚಾಂದ್ರಮಾನ ತಿಂಗಳ ವರ್ಷವಾಗುತ್ತದೆ. ಅಮಾವಾಸ್ಯೆಯೇ ಬರದಿದ್ದರೆ ಕ್ಷಯಮಾಸವಾಗಿ ಹನ್ನೊಂದೇ ತಿಂಗಳ ವರ್ಷವಾಗುವ ಪದ್ಧತಿಯೂ ಇದೆ. ಚಂದ್ರನ ಸಂಚಾರವನ್ನು ಗಣಿತದಿಂದಲೇ ನಿರ್ಧರಿಸಿ ಕರಾರುವಾಕ್ಕಾಗಿ ತಿಥಿಗಳ ನಿರ್ಣಯ ಮಾಡಿ ನಂತರ ಸೂರ್ಯನ ಸಂಚಾರಕ್ಕೆ ಹೊಂದಿಸಿ ಆ ಮೂಲಕ ಚಾಂದ್ರಮಾನವನ್ನೂ ಸೌರಮಾನದ 365 1/4 ದಿನಕ್ಕೆ ಹೊಂದಿಸುವುದನ್ನು ವೈಜ್ಞಾನಿಕವಾಗಿ ಕಂಡುಹಿಡಿದು ಪ್ರತ್ಯಕ್ಷಂ ಜ್ಯೌತಿಷಂ ಶಾಸ್ತ್ರಮ್ ಎಂಬುದನ್ನು ಲೋಕಕ್ಕೆ ತೋರಿಸಿಕೊಟ್ಟ ಧರ್ಮ ನಮ್ಮದು.ಇದನ್ನು ಬಿಟ್ಟು ಪಾಶ್ಚಾತ್ಯದೇಶಗಳಿಗೆ ದಾಸರಾಗುವುದು ಎಷ್ಟರಮಟ್ಟಿಗೆ ಸರಿ?
ಚೈತ್ರಮಾಸದ ನವಮಿಯಂದೇ ರಾಮ ಹುಟ್ಟಿದ್ದು ಎಂದು ನಂಬಿಕೊಂಡ ಸಂಸ್ಕೃತಿ ನಮ್ಮದು. ಈ ರಾಮ ಹುಟ್ಟಿದ ಮಾಸದ ಚಾಂದ್ರಮಾನ ಯುಗಾದಿಯಿಂದ ಆರಂಭಿಸಿ ನವಮೀಪರ್ಯಂತ ಚೈತ್ರನವರಾತ್ರಿ ಎಂದು ಪ್ರಸಿದ್ಧವಾಗಿ ರಾಮನನ್ನು ಆರಾಧಿಸುವ ಕ್ರಮ ಇದೆ.
ಮರ್ಯಾದಾಪುರುಷೋತ್ತಮ ರಾಮನಿಂದ ಅನುಗೃಹೀತರಾಗಿ ನಾವೂ ಅವನ ಧರ್ಮಾವಲಂಬಿಗಳಾಗೋಣ . ಆ ಮೂಲಕ ರಾಮರಾಜ್ಯ ಕಟ್ಟೋಣ. ರಾಮರಾಜ್ಯದ ವಿರೋಧಿಗಳನ್ನು ಎದುರಿಸೋಣ . ಆ ಮೂಲಕ ಭಾರತವನ್ನು ಮತ್ತೆ ಕಟ್ಟಿ ಬೆಳೆಸೋಣ ಎಂಬ ಹಿರಿಯ ಉಪದೇಶಗಲೂ ಈ ಸಂದರ್ಭದಲ್ಲಿ ಸ್ಮರಣೀಯ.















































ಕನಿಷ್ಟ ಒಂದು ದಿನವಾದರೂ ಪಂಚಾಂಗ ಪಠಿಸುವ ದಿನವಿದು. ಕಾಲನಿರ್ಣಯಗಳನ್ನು ಸರಿಯಾಗಿ ತಿಳಿದರೆ ಪಂಚಾಂಗಗಳನ್ನು ತಿಳಿದರೆ ಶ್ರೇಯಸ್ಸಾಗುತ್ತದೆ ಎಂದು ಸಾರುವ ದಿನವಿದು. ಇಡೀ ಮನೆಯಲ್ಲಿ ಸಂತಸದ ವಾತಾವರಣ ತುಂಬುವ ದಿನವಿದು. ಸಂಬಂಧಗಳನ್ನು ಬೆಸೆದು ಗಟ್ಟಿಯಾಗಿಸುವ ದಿನವಿದು. ಆ ದಿನ ಸಾಲ ಮಾಡಕೂಡದು ಎಂಬ ಎಚ್ಚರಿಕೆಯ ಮಾತುಬೇರೆ. ಚಟಗಳಿಂದ ದೂರವಿರಬೇಕೆಂಬ ಗಂಭೀರದ ಆಜ್ಞೆಗಳು ಬೇರೆ. ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸಬೇಕೆಂದು ಬೇವುಬೆಲ್ಲಗಳೆರಡನ್ನೂ ಪೂಜಿಸಿ ಭುಂಜಿಸುವ ಸುಂದರಬದುಕಿನ ಪಾಠಕಲಿಸುವ ದಿನವಿದು. ಎಂತಹ ಒಳ್ಳೆಯ ಕ್ರಮ. ಹೊಸದಿನ ಶುಭದಿನ ಎನ್ನುವುದು ಸಾರ್ಥಕದ ಮಾತು. ಎಲ್ಲ ದಿನವೂ ಶುಭದಿನವಾಗಿರಲಿ ಎನ್ನುವುದು ಅದರೊಳಗಿನ ಧ್ವನಿ.