ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಭರ್ಜರಿ ಪ್ರವಾಸ ಕೈಗೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಹಾಗೂ ಶಿವಮೊಗ್ಗ ಕ್ಷೇತ್ರದ ಕಾಂಗ್ರಸ್ ಚುನಾವಣಾ ಉಸ್ತುವಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ ಸೇರಿದಂತೆ ಕಾಂಗ್ರೆಸ್ ನಾಯಕರು ಸಾತ್ ನೀಡಿದ್ದಾರೆ.
ಬೈಂದೂರು, ನಾಡ, ಆಲೂರು, ನಾವುಂದ, ತ್ರಾಸಿ ಮೊದಲಾದೆಡೆ ಸಭೆ-ಸಮಾವೇಶ ನಡೆಸಿದ ಈ ನಾಯಕರು ಕೇಂದ್ರದ ಮೋದಿ ಸರ್ಕಾರದ ವೈಫಲ್ಯ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳನ್ನು ಜನತೆಯ ಮುಂದಿಟ್ಟು ಮತಗಳಿಸುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಹುರಿಯಾಳು ಗೀತಾ ಶಿವರಾಜ್ ಕುಮಾರ್ ಅವರು ‘ನಾನು ನಿಮ್ಮ ಮನೆಮಗಳು’ ಎನ್ನುತ್ತಾ ಆತ್ಮೀಯತೆಯ ಮಂತ್ರ ಪಠಿಸುತ್ತಾ ಮತ ಯಾಚಿಸುತ್ತಿರುವ ವೈಖರಿ ಗಮನಸೆಳೆದಿದೆ. ತಮ್ಮನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ಹಿಂದುಳಿದವರಿಗೆ ಬಿಜೆಪಿಯಲ್ಲಿ ಅನ್ಯಾಯ?
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ನಾಯಕ ಜಿ.ಎ.ಬಾವಾ ಮಾತನಾಡಿ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅನ್ಯಾಯವಾಗುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನೇ ದೂರ ತಳ್ಳಲಾಗಿದೆ ಎಂದು ಬೊಟ್ಟು ಮಾಡಿದರು.
ಬಿಜೆಪಿ ಪಕ್ಷವು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಈ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರ ಸ್ವಾತಂತ್ರೋತ್ಸವ ಪರೇಡ್’ನಲ್ಲಿ ನಾರಾಯಣ ಗುರುಗಾಲ ಟ್ಯಾಬ್ಲೋವನ್ನು ಕೈಬಿಟ್ಟು ಅಪಮಾನ ಮಾಡಿದ್ದನ್ನು ನಾವು ಮರೆತಿಲ್ಲ ಎಂದ ಜಿ.ಎ.ಬಾವಾ, ನಾರಾಯಣ ಗುರುಗಳ ಪಠ್ಯವನ್ನೂ ಕೈಬಿಟ್ಟು ಇಡೀ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ. ಆ ಸಂದರ್ಭದಲ್ಲಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರೂ ಮೌನ ವಹಿಸಿದ್ದರು ಎಂದು ಗಮನಸೆಳೆದರು.
ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ಈಶ್ವರಪ್ಪ ಅವರನ್ನು ಅವಮಾನಿಸಿದರೆ, ಅತ್ತ ದೆಹಲಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕೇಜ್ರಿವಾಲ್ ಅವರನ್ನೂ ಬಿಜೆಪಿ ಸರ್ಕಾರ ಜೈಲಿಗಟ್ಟಿದೆ. ಈ ಮೂಲಕ ಹಿಂದುಳಿದ ವರ್ಗದವರ ವಿರುದ್ಧ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಜಿ.ಎ.ಬಾವಾ ಉದಾಹರಿಸಿದರು,