ಉಡುಪಿ: ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿರುವ ನರಮೇಧ ಪ್ರಕರಣ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಭಾನುವಾರ ಮಲ್ಪೆ ಸಮೀಪದ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರನ್ನು ಹಂತಕ ನಿರ್ದಯಿಯಾಗಿ ಕೊಲೆ ಮಾಡಿದ್ದು, ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಕೊಲೆ ನಡೆದ ಸ್ಥಳಕ್ಕೆ ಶಾಸಕರು ಸೇರಿದಂತೆ ಗಣ್ಯರು ಭೇಟಿ ನೀಡಿ ಮೃತರ ಬಂಧುಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಹಿರಿಯ ಕಾಂಗ್ರೆಸ್ ನಾಯಕ ಜಿ.ಎ.ಬಾವ ಅವರು ಮಂಗಳವಾರ ಮಲ್ಪೆ ಸಮೀಪದ ನೇಜಾರಿನಲ್ಲಿರುವ ಮೃತರ ಮನೆಗೆ ತೆರಳಿ ಕುಟುಂಬ ಸದಸ್ಯರ ಜೊತೆ ಮಾತನಾಡಿದರು.
ಹಸೀನಾ ಹಾಗೂ ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್ (14) ಕೊಲೆಯಾಗಿದ್ದು ಮೃತರ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಸಮಾಧಾನದ ಮಾತುಗಳನ್ನಾಡಿದ ಜಿ.ಎ.ಬಾವ, ಗಾಯಾಳು ಸಹಿತ ಕುಟುಂಬದಲ್ಲಿ ನೊಂದವರಿಗೆ ನೆರವು ನೀಡುವ ಭರವಸೆ ನೀಡಿದರು. ಮೃತ ಹಸೀನಾ ಅವರ ಪತಿ ನೂರ್ ಮಹಮ್ಮದ್ ಅವರು ವಿದೇಶದಲ್ಲಿದ್ದು ಅವರ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ ಜಿ.ಎ.ಬಾವ, ಸಾಂತ್ವನ ಹೇಳಿದರು.
ಇದೇ ವೇಳೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಎಸ್ಪಿ ಜೊತೆಗೂ ಮಾತನಾಡಿ ಪ್ರಕರಣದ ತನಿಖೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎ.ಬಾವ, ಕೊಲೆ ಪ್ರಕರಣ ಕುರಿತಂತೆ ಪೊಲೀಸರು ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ ಎಂದರು. ಕೊಲೆಗಾರನ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದ್ದು, ಅಪರಾಧಿಗೆ ಶಿಕ್ಷೆಯಾಗುವುದು ಖಚಿತ ಎಂದರು.
ಈ ನಡುವೆ, ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ ಜಿ.ಎ.ಬಾವ, ಆರೋಪಿ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿವಿಧ ತಂಡಗಳನ್ನು ರಚಿಸಿ ಕ್ಷಿಪ್ರ ಕಾರ್ಯಾಚರಣೆಗೆ ಕ್ರಮ ಕೈಗೊಂಡರು. ಹಾಗಾಗಿ ತನಿಖೆಯಲ್ಲಿ ಆರಂಭಿಕ ಯಶಸ್ಸು ಸಾಧಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹ ಸಚಿವ ಪರಮೇಶ್ವರ್ ಕೂಡಾ ಮೃತರ ಕುಟುಂಬ ಸದಸ್ಯರ ಜೊತೆ ಮಾತನಾಡಿ ಕುಟುಂಬಕ್ಕೆ ಭದ್ರತೆ ನೀಡುವ ಭರವಸೆ ನೀಡಿದರೆಂದು ಜಿ.ಎ.ಬಾವ ಇದೇ ವೇಳೆ ತಿಳಿಸಿದರು.