ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ಮತ್ತು ನಿರಾಣಿ ಬಣ ಸೃಷ್ಟಿಯಾಗಿದೆಯೇ? ಇಂಥದ್ದೊಂದು ಅನುಮಾನಕ್ಕೆ ಪುಷ್ಠಿ ನೀಡಿರುವುದು ಬಿಎಸ್‌ವೈ ಆಪ್ತ ಸಚಿವರ ಸುದ್ದಿಗೋಷ್ಠಿ.
ಬೆಂಗಳೂರು: ಮೀಸಲಾತಿ ಹೋರಾಟದಲ್ಲಿ ನಿರತವಾಗಿರುವ ಪಂಚಮಸಾಲಿ ಸಮುದಾಯದಲ್ಲಿ ಬಿರುಕು ಉಮಟಾಗಿದೆಯೇ? ಇದೀಗ ಪಂಚಮಸಾಲಿ ಹೋರಾಟದಲ್ಲೂ ಯತ್ನಾಳ್ ಮತ್ತು ನಿರಾಣಿ ಬಣ ಸೃಷ್ಟಿಯಾಗಿದೆಯೇ? ಇಂಥದ್ದೊಂದು ಪ್ರಶ್ನೆ ಇದೀಗ ನಿರ್ಮಾಣವಾಗಿದೆ. ಈ ಅನುಮಾನಕ್ಕೆ ಪುಷ್ಠಿ ನೀಡಿರುವುದು ವಿಧಾನಸೌಧದಲ್ಲಿಂದು ಬಿಎಸ್‌ವೈ ಆಪ್ತ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿ.ಸಿ.ಪಾಟೀಲ್ ನಡೆಸಿದ ಜಂಟಿ ಸುದ್ದಿಗೋಷ್ಠಿ.
ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಮೀಸಲಾತಿ ಹೋರಾಟದಲ್ಲಿ ಮಂದಾಳುತ್ವ ವಹಿಸಿರುವ ಶಾಸಕ ಬಸನಗೌಡ ಪಾಟೀಲ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ನಿರಾಣಿ ಅವರು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ಮಾಜಿ ಶಾಸಕ ವಿಜಯನಂದಾ ಕಾಶಪ್ಪನವರ್ ಅವರನ್ನು ಮೊಣಚು ಮಾತಿನಿಂದ ತಿವಿದ ನಿರಾಣಿ, ಹಿಂದೆ ನಿಮ್ಮ ತಂದೆಯೇ ಶಾಸಕರಾಗಿದ್ದರು. ನಿಮ್ಮ ತಾಯಿ, ನೀವು ಕೂಡ ಶಾಸಕರಾಗಿದ್ದೀರಿ. ಅಂದು ನೀವ್ಯಾಕೆ ? ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಒತ್ತಡ ಹೇರಲಿಲ್ಲ ಎಂದು ಪ್ರಶ್ನಿಸುವ ಮೂಲಕ ಹೋರಾಟದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಈಗ ಪಾದಯಾತ್ರೆ ಮಾಡುತ್ತಾ ಇದ್ದೀರಾ. ಆಗ ಬಾರುಕೋಲ್ ಹಿಡ್ಕಂಡು ಏಕೆ ಹೋಗಲಿಲ್ಲ. ಹಿಂದೆ ಎಲ್ಲಿ ಹೋಗಿದ್ರಿ ನೀವು? ಸೋಮವಾರ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಹಣ ಎಲ್ಲಿಂದ ಬಂತು? ಇದರ ಬಗ್ಗೆ ಗೊತ್ತಾಗಬೇಕು ಎಂದು ಅವರು ಆಗ್ರಹಿಸಿದರು. ನೀವು ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಣೆ ಮಾಡಿಕೊಂಡು, ಪಂಚಮಸಾಲಿ ಸಮಾಜದ ಅಧ್ಯಕ್ಷರಾದ್ದೀರಿ. ನಾವು 15 ಮಂದಿ ಶಾಸಕರಿದ್ದೇವೆ. ನಮ್ಮನ್ನ ಕೇಳಿದ್ದೀರಾ? ಎಂದು ಪ್ರಶ್ನೆ ಹಾಕಿದರು.
ಮೊನ್ನೆಯಷ್ಟೇ ನಿಮ್ಮ ಮೇಲೆ ಎಫ್‍ಐಆರ್ ಆಗಿದೆ. ಹುನಗುಂದದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಎಫ್‍ಐಆರ್ ಆಗಿದೆ. ಹಿಂದೆ ಬೆಂಗಳೂರಿನಲ್ಲೂ ದೂರು ದಾಖಲಾಗಿತ್ತು. ಎಫ್‍ಐಆರ್ ದಾಖಲಾದವರು ಯಾರಾದರೂ
ಸಮುದಾಯದ ಅಧ್ಯಕ್ಷರಾಗಿದ್ದೀರಾ ಎಂದು ಕಾಶಪ್ಪನವರ್ ವಿರುದ್ಧ ಟೀಕಾ ಪ್ರಹರ ನಡೆಸಿದರು.
ಕೂಡಲಸಂಗಮ ಹಾಗೂ ಹರಿಹರ ಪೀಠದ ಜೊತೆಗಾಗಲಿ, ಇಲ್ಲವೇ ಟ್ರಸ್ಟ್ ಜೊತೆಗೆ ಸೌಜನ್ಯಕ್ಕಾದರೂ ಚರ್ಚೆಸದೆ ಏಕಪಕ್ಷೀಯವಾಗಿ ಅಧ್ಯಕ್ಷರಾಗಿ ಘೋಷಣೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಿಂದ ಸಮಾಜದ ಹಿತ ಕಾಪಾಡಲು ಸಾಧ್ಯವಿಲ್ಲ. ರಾಜಕೀಯದಿಂದ ದೂರ ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ನಿರಾಣಿ ಶ್ರೀಗಳಿಗೆ ಮನವಿ ಮಾಡಿದರು.
ಪಂಚಮಸಾಲಿಗೆ ಮಾತ್ರ ಯಾಕೆ?
ಪಂಚಮಸಾಲಿಯಷ್ಟೇ 2ಎಗೆ ಸೇರಿಸುವುದಲ್ಲ. ಸಮಸ್ತ ವೀರಶೈವ ಲಿಂಗಾಯತರನ್ನ ಸೇರಿಸಬೇಕಿದೆ. ನಮ್ಮದು ರೈತಾಪಿ ಸಮುದಾಯ. ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಕೇವಲ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಕೇಳುತ್ತಿದ್ದೇವೆ. ಪಂಚಮಸಾಲಿಗೆ 2ಎ ಮೀಸಲಾತಿ ಸಿಗಬೇಕು. ಇದರ ಜೊತೆ ಇತರ ಸಣ್ಣ ಸಮಾಜಕ್ಕೂ ಮೀಸಲಾತಿ ಕೊಡಬೇಕು ಎಂದು ಸಚಿವರು ಪ್ರತಿಪಾದಿಸಿದರು.
ಇಬ್ಬರು ಶ್ರೀಗಳು ಬೇರೆಯವರ ಮಾತಿನಂತೆ ನಡೆಯಬಾರದು. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಶಪ್ಪನವರ್ ಮಾತಿನಂತೆ ನಡೆಯಬಾರದು. 80 ಲಕ್ಷ ಪಂಚಮಸಾಲಿ ಸಮುದಾಯದ ಶ್ರೀಗಳು ಎಂಬುದನ್ನು ಸ್ವಾಮೀಜಿಗಳು ಮರೆಯಬಾರದು ಎಂದವರು ಹೇಳಿದರು.
ಸಮಾವೇಶ ದುರುಪಯೋಗ?
ಸಣ್ಣ ಕೈಗಾರಿಕೆ ಮತ್ತು ವಾರ್ತ ಹಾಗೂ ಪ್ರಸಾರ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಸೋಮವಾರ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಯಿತು. ಲಕ್ಷಾಂತರ ಜನ ಇದರಲ್ಲಿ ಭಾಗವಹಿಸಿದ್ದರು. ಅರ್ಥ ಪೂರ್ಣವಾಗಿ ಕಾರ್ಯಕ್ರಮ ನಡೆಯಿತು. ಆದರೆ. ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಯತ್ನಾಳ್ ಹಾಗೂ ವಿನಯನಂದಾ ಕಾಶಪ್ಪನವರ್ ವಿರುದ್ದ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡುವ ಕುರಿತಾಗಿ ಈಗಾಗಲೇ ಹಿಂದುಳಿದ ಆಯೋಗಕ್ಕೆ ಸೂಚನೆ ಕೊಟ್ಟಿದ್ದಾರೆ. ಆಯೋಗ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ನಂತರ ಅದನ್ನು ಸರ್ಕಾರ ಒಪ್ಪಬೇಕು. ಬಳಿಕ ಕೇಂದ್ರಕ್ಕೆ ಕಳಿಸಿಕೊಡಬೇಕು ಇದು ಕಾನೂನು ಸಮ್ಮತ ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿಂದೆ ಸಾಮಾನ್ಯ ವರ್ಗದಲ್ಲಿದ್ದ ಪಂಚಮಸಾಲಿ ಸಮುದಾಯವನ್ನು ಒಬಿಸಿಗೆ ಸೇರಿಸಿದ್ದು ಯಡಿಯೂರಪ್ಪನವರೇ. 2016 ರಲ್ಲಿ ಕೂಡಲಸಂಗಮ ಟ್ರಸ್ಟ್ ಅರ್ಜಿಸಲ್ಲಿಸಿತ್ತು. 2ಎ’ಗೆ ಸೇರಿಸಲು ಅರ್ಜಿ ಸಲ್ಲಿಸಿತ್ತು. ಆಗ ಆರ್ಜಿಯನ್ನ ವಜಾಗೊಳಿಸಲಾಗಿತ್ತು ಎಂದು ತಿಳಿಸಿದರು.
ಕಾಶಪ್ಪ ಜಯಮೃತ್ಯುಂಜಯ ಶ್ರೀಗಳನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ತಾನೇ ಸಮಾಜದ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ವಿರುದ್ಧ ಸಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಕೂಡ ಅವರು ಆರೋಪಿಸಿದ್ದಾರೆ.ಅವರು ಸಿಎಂ, ಹಾಗೂ ವಿಜಯೇಂದ್ರ ಹೆಸರು ತರುತ್ತಿದ್ದಾರೆ. ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಮಹೇಶ್ ಕುಮ್ಮಟಳ್ಳಿ, ಅರುಣ್
ಕುಮಾರ್ ಪೂಜಾರ್ , ಶಂಕರ್ ಪಾಟೀಲ್ ಮುನೇನಕೊಪ್ಪ , ಸಿದ್ದು ಸವದಿ, ವಿರೂಪಾಕ್ಷಪ್ಪ ಬಳ್ಳಾರಿ,ಕಳಕಪ್ಪ ಬಂಡಿ,ಮಹಾಂತೇಶ್ ದೊಡ್ಡ ಗೌಡರ್,ಹಾಗೂವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬೀಕಾಯಿ, ಮುಂತಾದವರು ಉಪಸ್ಥಿತರಿದ್ದರು.