ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಅನತಿ ದೂರದಲ್ಲಿರುವ ಕಲ್ಪತರು ನಾಡು ತುಮಕೂರಿನ ಸುಸಜ್ಜಿತ KSRTC ಬಸ್ಸು ನಿಲ್ದಾಣದ ಮೊದಲ ಹಂತ ಗಮನಸೆಳೆದಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ನಡುವೆ ಅನೇಕ ನಗರಗಳನ್ನು ಸಂಪರ್ಕಿಸುವ ಕೇಂದ್ರ ಎಂದೇ ಗುರುತಾಗಿರುವ ತುಮಕೂರಿನಲ್ಲಿ ಶತಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬಸ್ ನಿಲ್ದಾಣವು ಕಲ್ಪತರು ನಾಡಷ್ಟೇ ಅಲ್ಲ, ಬಯಲುಸೀಮೆಯ ಅನೇಕ ಜಿಲ್ಲೆಗಳ ಜನರ ಪಾಲಿಗೂ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಮಲೆನಾಡು, ಬಯಲುಸೀಮೆಯ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಂತಿರುವ ತುಮಕೂರು ನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಬೇಕೆಂಬ ಬೇಡಿಕೆ ಬಹುಕಾಲದ್ದು. ಈ ಬೇಡಿಕೆಗೆ ತಕ್ಕಂತೆ ಸುಮಾರು 4 ಎಕರೆ 17 ಗುoಟೆ ನಿವೇಶನದಲ್ಲಿ ಐದು ಅಂತಸ್ತುಗಳ ಬೃಹತ್ ನಿಲ್ದಾಣ ಸಮುಚ್ಚಯವನ್ನು ಸಿದ್ಧಗೊಳಿಸಲಾಗಿದೆ. KSRTC ನಿಗಮವು ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ಭರವಸೆಗೆ ತಕ್ಕಂತೆ ಈ ಬಸ್ ನಿಲ್ದಾಣದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ಬಸ್ ನಿಲ್ದಾಣದ ಸಮಗ್ರ ಮರು ಅಭಿವೃದ್ಧಿ ಕಾಮಗಾರಿಯ ಮೊದಲ ಹಂತ ಪರಿಪೂರ್ಣವಾಗಿ ನಡೆದಿದ್ದು 29.01.2024ರಂದು ಉದ್ಘಾಟನೆಯಾಗಲಿದೆ. ಈ ಕಾಮಗಾರಿಗಾಗಿ102.56 ಕೋಟಿ ರೂಪಾಯಿಗಳನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು 8.64 ಕೋಟಿ ರೂಪಾಯಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭರಿಸಲಿದೆ.
ತುಮಕೂರು ನೂತನ ಬಸ್ ನಿಲ್ದಾಣದ ವಿಶೇಷತೆಗಳು:
- ಬಸ್ಸುಗಳ ವ್ಯವಸ್ಥಿತ ನಿಲುಗಡೆಗಾಗಿ 65 ಪ್ಲಾಟ್ ಫಾರ್ಮ್’ಗಳು ಇವೆ.
- ಕೆಳ ಹಂತದ ನೆಲಮಹಡಿ ಹಾಗೂ ಮೇಲ ಹಂತದ ನೆಲಮಹಡಿಯಲ್ಲಿ ಬಸ್ ನಿಲುಗಡೆಗೆ ಅಂಕಣದ ವ್ಯವಸ್ಥೆ,
- ಪುರುಷ, ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೆಕವಾದ ಆಧುನಿಕ ಶೌಚಾಲಯ ಮತ್ತು ಮೂತ್ರಾಲಯದ ವ್ಯವಸ್ಥೆ ಇದೆ.
- ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ.
- ಪ್ರಯಾಣಿಕರಿಗೆ ಆಸನದ ವ್ಯವಸ್ಥೆಇದೆ.
- ಸಂಚಾರ ನಿಲ್ದಾಣ ಅಧಿಕಾರಿಗಳ ಕೊಠಡಿ, ಮುಂಗಡ ಕಾಯ್ದಿರಿಸುವಿಕೆ ಮತ್ತು ಪಾಸ್ ವಿತರಣಾ ಕೊಠಡಿ ವ್ಯವಸ್ಥೆಗೊಳಿಸಲಾಗಿದೆ.
- ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಮಕ್ಕಳ ಪೋಷಣೆಗಾಗಿ ತಾಯಂದಿರ ಕೊಠಡಿ ನಿರ್ಮಿಸಲಾಗಿದೆ.
- ಎರಡು ಹಂತದ ಬಸ್ ನಿಲುಗಡೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಎರಡು ಉಪಹಾರ ಗೃಹ ಮತ್ತು ಮೂರು ವಾಣಿಜ್ಯ ಮಳಿಗೆಗಳು ಇವೆ.
- ಬಸ್ ನಿಲ್ದಾಣಕ್ಕೆ ಸಿಸಿಟಿವಿ ಕಣ್ಗಾವಲು ಸಹಿತ ಸುರಕ್ಷಾ ಕ್ರಮ ಅಳವಡಿಸಲಾಗಿದೆ,
- ವಿದ್ಯುತ್ ಹಾಗೂ ಎಲ್ಇಡಿ ಬೆಳಕಿನ ವ್ಯವಸ್ಥೆಅಚ್ಚುಕಟ್ಟಾಗಿದೆ.
- ದ್ವಿಚಕ್ರ ವಾಹನ, ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಎರಡು ಹಂತದಲ್ಲಿ ನೆಲಮಾಳಿಗೆಯಲ್ಲಿ ನಿಲ್ದಾಣದ ವ್ಯವಸ್ಥೆ ಇದೆ.
- ಪ್ರಯಾಣಿಕರ ಅನುಕೂಲಕ್ಕಾಗಿ 4 ಲಿಫ್ಟ್ ಹಾಗೂ 4 Escaltor ಅಳವಡಿಸಲಾಗುತ್ತದೆ.
ಈ ಸುಸಜ್ಜಿತ KSRTC ಬಸ್ ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿಯ ಮೊದಲನೇ ಹಂತವನ್ನು 29.01.2024ರಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ, ಕೆ.ಎನ್.ರಾಜಣ್ಣ, ಸುರೇಶ್.ಬಿ.ಎಸ್, ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, KSRTC ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸಂಸದ ಜಿ.ಎಸ್. ಬಸವರಾಜ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


























































