ಬೆಂಗಳೂರು: ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಾಣಂತಿ ಹಾಗೂ ಹಸುಗೂಸುಗಳು ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಬಾಣಂತಿ ಹಾಗೂ ಹಸುಗೂಸುಗಳ ಸಾವಿನ ಪ್ರಕರಣವನ್ನು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದು ಈ ಘಟನೆಗೆ ಸಚಿವ ಸುಧಾಕರ್ ಅವರೇ ಹೊಣೆ ಎಂದಿದ್ದಾರೆ. ಅವರ ರಾಜೀನಾಮೆ ಅನಿವಾರ್ಯ ಎಂದು ಹೆಚ್ಡಿಕೆ ಹೇಳಿದ್ದಾರೆ. ಕಾಂಗ್ರೆಸ್ ಧುರೀಣ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ತುಮಕೂರು ಜಿಲ್ಲೆಯ ವೈದ್ಯರ ನಿರ್ಲಕ್ಷದಿಂದಾಗಿ ನಡೆದ ಬಾಣಂತಿ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣಕರ್ತರಾದ ಆರೋಗ್ಯ ಸಚಿವ ಸುಧಾಕರ್ ಅವರು ತಕ್ಷಣ ರಾಜೀನಾಮೆ ನೀಡಬೇಕು, ಆರೋಪಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲೆಯ ವೈದ್ಯರ ನಿರ್ಲಕ್ಷದಿಂದಾಗಿ ನಡೆದ ಬಾಣಂತಿ ಮತ್ತು ಎರಡು ಹಸುಗೂಸುಗಳ ಸಾವಿಗೆ ಕಾರಣಕರ್ತರಾದ ಆರೋಗ್ಯ ಸಚಿವ @mla_sudhakar ಅವರು ತಕ್ಷಣ ರಾಜೀನಾಮೆ ನೀಡಬೇಕು, ಆರೋಪಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. 1/4#ಸರ್ಕಾರಿಕೊಲೆಗಳು pic.twitter.com/9ism67cmh2
— Siddaramaiah (@siddaramaiah) November 3, 2022
ಕೊರೊನಾ ಕಾಲದಿಂದ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಗಳಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸುಧಾಕರ್ ಅವರೇ ಆರೋಗ್ಯ ಸಚಿವರಾಗಿ ಮುಂದುವರಿದರೆ ಸರಣಿ ವೈದ್ಯಕೀಯ ಹತ್ಯೆಗಳು ಮುಂದುವರಿಯುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಿರುವ ಸಿದ್ದರಾಮಯ್ಯ, ನೇಮಕಾತಿಯಿಂದ ಹಿಡಿದು ವರ್ಗಾವಣೆ ವರೆಗೆ ಎಲ್ಲವೂ ದುಡ್ಡಿನ ಬಲದಿಂದಲೇ ನಡೆಯುತ್ತಿರುವ ಕಾರಣ ಯಾವ ಅಧಿಕಾರಿಯೂ ಯಾವ ಸಚಿವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಕರ್ತವ್ಯಭ್ರಷ್ಟ ಅಧಿಕಾರಿಗಳನ್ನು ಪ್ರಶ್ನಿಸುವ-ಶಿಕ್ಷಿಸುವ ನೈತಿಕತೆ ಬಿಜೆಪಿಗೂ, ಭ್ರಷ್ಟ ಸಚಿವರಿಗೂ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.
ಗುಂಡಿಬಿದ್ದ ರಸ್ತೆಗಳಲ್ಲಿ ಜನ ಬಿದ್ದು ಸಾಯುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದವರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 40% ಕಮಿಷನ್ ನೀಡಲಿಕ್ಕಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ.ಬಿಜೆಪಿ ಸರ್ಕಾರ ಜನರನ್ನು ಸಾಯಿಸುವ ಸರ್ಕಾರವೇ ಹೊರತು ಬದುಕಿಸುವ ಸರ್ಕಾರ ಅಲ್ಲ ಎಂದವರು ವ್ಯಾಖ್ಯಾನಿಸಿದ್ದಾರೆ.
























































