ಬೆಂಗಳೂರು: ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ತುಳುಗೆ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ಸರ್ಕಾರ ಶೀಘ್ರದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಶೋಕ್ ರೈ ಅವರು ಪ್ರಸ್ತಾಪಿಸಿದ್ದಾರೆ. ಆಗ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ “ತುಳು ಭಾಷೆಯ ಸ್ವರೂಪ, ಇತಿಹಾಸ, ಸಾಹಿತ್ಯ ಪರಂಪರೆ, ತುಳು ಲಿಪಿ, ಪ್ರಾಚೀನ ತುಳು ಸಾಹಿತ್ಯ, ಆಧುನಿಕ ತುಳು ಸಾಹಿತ್ಯ, ಸಂಸ್ಕೃತಿ, ತುಳು ಶಾಸನಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಡಾ.ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, 2023ರ ಫೆಬ್ರವರಿಯಲ್ಲೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು ಎಂದರು.
ಈ ರೀತಿ ಭಾಷೆಗಳನ್ನು ಹೆಚ್ಚುವರಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡುವಲ್ಲಿ ಪಶ್ಚಿಮಬಂಗಾಳವು ಕೆಲವು ನಿಯಮಗಳನ್ನು ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ನಾವು ಪತ್ರವನ್ನು ಕೂಡ ಬರೆದಿದ್ದೇವೆ. ಈ ಹಿನ್ನೆಲೆಯಲ್ಲಿ ಉರ್ದುವನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಿರುವ ಆಂಧ್ರಪ್ರದೇಶಕ್ಕೆ ನಮ್ಮ ಕರ್ನಾಟಕ ತಂಡವು ಭೇಟಿ ನೀಡಿದೆ. ಅದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ನಾವು ಸಭೆ ಕರೆಯುತ್ತೇವೆ ಎಂದರು.
ಜೊತೆಗೆ ತುಳು ಭಾಷೆಯನ್ನು ಮಾತನಾಡುವ ಎಲ್ಲಾ ಶಾಸಕರನ್ನು ಕೂಡ ಸಭೆಗೆ ಆಹ್ವಾನ ನೀಡುತ್ತೇವೆ. ಮಾತುಕತೆಯ ನಂತರ ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಆದಷ್ಟು ಶೀಘ್ರದಲ್ಲಿ ಘೋಷಣೆ ಮಾಡುತ್ತೇವೆ” ಎಂದು ತಿಳಿಸಿದರು.





















































