ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ಕಂಡುಬರುತ್ತಿದೆ. ರಾಜಧಾನಿಯ ಪ್ರಗತಿಗೆ ಅನುದಾನವೇ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅಶೋಕ್, ಬೆಂಗಳೂರು ಅಭಿವೃದ್ಧಿ ಇಲ್ಲ, ಕನ್ನಡಕ್ಕೂ ಬೆಂಬಲವಿಲ್ಲ, ದರ ಏರಿಕೆಯೇ ಎಲ್ಲಾ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಎರಡು ವರ್ಷದಿಂದ ಅಭಿವೃದ್ಧಿ ನಡೆದಿಲ್ಲ. ನನ್ನ ಕ್ಷೇತ್ರಕ್ಕೆ ಕೇವಲ 10 ಕೋಟಿ ರೂ. ನೀಡಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಭೈರತಿ ಸುರೇಶ್ ಕ್ಷೇತ್ರಕ್ಕೆ ಒಂದು ವರ್ಷಕ್ಕೆ 100 ಕೋಟಿ ರೂ. ನೀಡಲಾಗಿತ್ತು. ಆದರೆ ಈಗಿನ ಸರ್ಕಾರದಿಂದ ಹಣ ಬರುತ್ತಿಲ್ಲ. ಮಳೆಗಾಲ ಬರುವ ಮುನ್ನ ಡಾಂಬರೀಕರಣ ಮಾಡಬೇಕಿತ್ತು. ಈಗ ಬ್ರ್ಯಾಂಡ್ ಬೆಂಗಳೂರು ಹೋಗಿ ಬ್ಯಾಡ್ ಬೆಂಗಳೂರು ಆಗಿದೆ ಎಂದು ಅಶೋಕ್ ದೂರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಜೆಪಿ 431 ಕೋಟಿ ರೂ. ನೀಡಿದರೆ, ಈಗ 265 ಕೋಟಿ ರೂ. ನೀಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿ ರೂ. ಅನ್ನು 10 ಕೋಟಿ ರೂ. ಇಳಿಸಲಾಗಿದೆ. ಸಾಂಸ್ಕೃತಿಕ ಸಂಘಗಳ ಸಹಾಯಧನ 29 ಕೋಟಿ ರೂ. ನಿಂದ 10 ಕೋಟಿ ರೂ.ಗೆ ಇಳಿದಿದೆ. ರಂಗಮಂದಿರಗಳಿಗೆ ಸಹಾಯಧನ ನೀಡಿಲ್ಲ. ಕಲಾವಿದರ ಪಿಂಚಣಿಗೆ ಅರ್ಜಿ ಆಹ್ವಾನಿಸಿಲ್ಲ. ಕಲಾ ತಂಡಗಳಿಗೆ ಹಣ ಕೊರತೆ ಉಂಟಾಗಿದೆ ಎಂದರು.
ಪೆಟ್ರೋಲ್, ಆಲ್ಕೋಹಾಲ್, ಮೆಟ್ರೋ, ಬಸ್ ಟಿಕೆಟ್, ಮದ್ಯ, ದತ್ತು ಸ್ವೀಕಾರ, ಮದುವೆ ಪ್ರಮಾಣಪತ್ರ, ಹಾಲು, ಮಾರ್ಗಸೂಚಿ ದರ ಎಲ್ಲಕ್ಕೂ ದರ ಏರಿಕೆ ಮಾಡಲಾಗಿದೆ. ಏರಿಕೆ ನಂತರವೂ ಜನಪರ ಸರ್ಕಾರ ಎಂದು ಯಾವ ಬಾಯಲ್ಲಿ ಹೇಳುತ್ತಾರೆ? ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 7 ರೂ.ಗೆ ಏರಿಸಿಲ್ಲ. 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಅವರೇ ಹಣಕಾಸಿನ ಸ್ಥಿತಿ ಬಗ್ಗೆ ಮಾತಾಡಿದ್ದಾರೆ. ಕಮಿಶನ್ 40% ಗಿಂತ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ಸಿಎಂ ಬಳಿ ಹೇಳಿದ್ದಾರೆ. ಆದರೂ ಸರ್ಕಾರ ಪಾರದರ್ಶಕತೆ ಬಗ್ಗೆ ಹೇಳುತ್ತದೆ. 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ ಎಂದು ಅಶೋಕ್ ಗಮನಸೆಳೆದರು.
ವಿವಿಧ ನಿಗಮಗಳ ಮೂಲಕ ಬಡವರಿಗೆ ಸರ್ಕಾರ ಸಾಲ ನೀಡಬೇಕಿತ್ತು. ಸಾಲ ಸಿಗದೆ ಜನರು ಮೈಕ್ರೋ ಫೈನಾನ್ಸ್ ಮೊರೆ ಹೋಗಿದ್ದಾರೆ. ನಾನು ಮಳವಳ್ಳಿಯ ಹೊನ್ನಾಪುರ ಗ್ರಾಮದ ಪ್ರೇಮಾ ಅವರ ಮನೆಗೆ ಭೇಟಿ ನೀಡಿದ್ದೆ. ಇವರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದ್ದು, ಮಗುವಿಗೆ ಹಾಲು ಕುಡಿಸುತ್ತಿರುವಾಗಲೇ ಪೊಲೀಸರು ಮನೆಯಿಂದ ಹೊರಗೆ ಹಾಕಿದ್ದರು. ಅದರಿಂದ ಬೇಸತ್ತು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡರು. ಅದನ್ನು ತಿಳಿದ ಮಗ ಮರುದಿನ ಆತ್ಮಹತ್ಯೆ ಮಾಡಿಕೊಂಡ. ಇದೇ ಗ್ರಾಮದಲ್ಲಿ ಸುಮಾರು 10 ಕುಟುಂಬಗಳು ಊರು ಬಿಟ್ಟು ಹೋಗಿವೆ. ಇರುವ ಕಾನೂನಿನಲ್ಲೇ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಸುಗ್ರೀವಾಜ್ಞೆ ತಂದಿದ್ದಾರೆ. ನಂತರವೂ ಸಮಸ್ಯೆ ಬಗೆಹರಿದಿಲ್ಲ. ಒಬ್ಬೇ ಒಬ್ಬ ಮೈಕ್ರೋ ಫೈನಾನ್ಸ್ ಮುಖ್ಯಸ್ಥರನ್ನು ಜೈಲಿಗೆ ಹಾಕಿಲ್ಲ. ಆಸ್ಪತ್ರೆಗಳಲ್ಲಿ ಬಾಣಂತಿಯರು ಸತ್ತರೂ ಕ್ರಮ ವಹಿಸಿಲ್ಲ ಎಂದು ಅಶೋಕ್ ದೂರಿದರು.
ಗಂಭೀರ ಕಾನೂನು ಉಲ್ಲಂಘನೆ ನಡೆದಿಲ್ಲ ಎಂಬುದು ಸರ್ಕಾರದ ಅಭಿಪ್ರಾಯ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕೋಮುವಾದಿಗಳು ದಾಳಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಹುಬ್ಬಳ್ಳಿಯಲ್ಲೂ ಈ ರೀತಿಯಾಗಿದ್ದು, ಆಗ ದುಷ್ಕರ್ಮಿಗಳನ್ನು ಬಿಡುಗಡೆ ಮಾಡಲಾಗಿತ್ತು. ಉಲ್ಲಾಳದಲ್ಲಿ ಹಗಲಲ್ಲೇ ಬ್ಯಾಂಕ್ ದರೋಡೆ ನಡೆದಿದೆ. ಬೀದರ್‌ನಲ್ಲೂ ಬ್ಯಾಂಕ್ ದರೋಡೆ ನಡೆದಿದು ಸಿಬ್ಬಂದಿಯ ಹತ್ಯೆಯಾಗಿದೆ. ಇಷ್ಟೆಲ್ಲ ಆದ ನಂತರವೂ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎನ್ನಲಾಗುತ್ತಿದೆ. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಲಾಗಿದೆ. ಆದರೂ ಆರೋಪಿಯ ವಿರುದ್ಧ ಕಠಿಣ ಕ್ರಮ ವಹಿಸದೆ ಆತನನ್ನು ಹುಚ್ಚ ಎಂದು ಕರೆಯಲಾಯಿತು. ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯಲ್ಲಿ ಗಲಭೆ ನಡೆದಿತ್ತು ಎಂದು ಸರ್ಕಾರದ ನಡೆ ಬಗ್ಗೆ ಅಶೋಕ್ ವ್ಯಂಗ್ಯವಾಡಿದರು.