ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಕಾಂಗ್ರೆಸ್ ನಾಯಕರು, ಭ್ರಷ್ಟಾಚಾರ ಆರೋಪ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಚುನಾವಣಾ ಆಯೋಗಕ್ಕೆ ವಿಜಯೇಂದ್ರ ಅವರು ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 16.09. 2022 ರಂದು ಲೋಕಾಯುಕ್ತದಿಂದ ಇವರ ಮೇಲೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಸೆಕ್ಷನ್ 7 A, 9, 10, 13 ಹಾಗೂ 383, 384, 415, 418, 420 ಕಾಯ್ದೆಗಳಡಿ ದೂರು ದಾಖಲಿಸಲಾಗಿದೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಇವರಿಗೆ ಸಮನ್ಸ್ ಜಾರಿಯಾಗಿದೆ ಎಂದು ನೆನಪಿಸಿದರು.
ಸಿಎಂ ಸಿದ್ದರಾಮಯ್ಯರ ರಾಜಿನಾಮೆ ಕೇಳುವ ಬಿಜೆಪಿಗರೇ ಮೊದಲು ವಿಜಯೇಂದ್ರ ಅವರಿಂದ ರಾಜಿನಾಮೆ ಕೊಡಿಸಿ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕರಿಗೆ ರಾಜಿನಾಮೆ ಕೇಳಿ. ಮೇಲ್ಮನೆಯ ವಿರೋಧ ಪಕ್ಷದ ನಾಯಕರು ಸಹ ಸಿಎ ಸೈಟ್ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ. ಇವರ ರಾಜಿನಾಮೆ ಕೇಳಿ. ಆನಂತರ ನಮ್ಮ ಸಿಎಂ ಬಗ್ಗೆ ಮಾತನಾಡಿ ಎಂದು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು.
ವಿಜಯೇಂದ್ರ ನಾಯಕತ್ವಕ್ಕೆ ಪ್ರಶ್ನೆ:
ಬಿಜೆಪಿಗರೇ ಮೂರು ಕಡೆ ಸಭೆ ನಡೆಸಿ ವಿಜಯೇಂದ್ರ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಇವರ ನಾಯಕತ್ವವನ್ನು ಯಾರೂ ಸಹ ಒಪ್ಪಿಕೊಂಡಿಲ್ಲ. ಈಶ್ವರಪ್ಪ ಅವರು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದವರೇ ನಿಮಗೆ ಮರ್ಯಾದೆ ಕೊಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಿಜೆಪಿಯ ನೀತಿ ಪಾಠ ನೋಡಿದರೆ ನರಿಗಳು ನ್ಯಾಯ ಹೇಳಿದಂತೆ ಭಾಸವಾಗುತ್ತದೆ. ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂದು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದು ಇದೇ ಬಿಜೆಪಿಯವರು. 2010ರಲ್ಲಿ ಔಟ್ ಲುಕ್ ಪತ್ರಿಕೆಯ ರಕ್ಷಾಪುಟದಲ್ಲಿ ಯಡಿಯೂರಪ ಅವರ ಫೋಟೊ ಹಾಕಿ ಕರ್ನಾಟಕದ ಮರ್ಯಾದೆ ಹರಾಜು ಹಾಕಲಾಗಿತ್ತು. ಭ್ರಷ್ಟ ಇತಿಹಾಸ ಹೊಂದಿರುವ ಬಿಜೆಪಿಯವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಕರ್ನಾಟಕ ಮರ್ಯಾದೆ ತೆಗೆದವರು ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಬಿಟ್ಟರೆ ನಾನೇ ಶಕ್ತಿಯುತ ಎಂದು ಅಮಿತ್ ಶಾ ಅವರು ಬಿಂಬಿಸಿಕೊಳ್ಳುತ್ತಾರೆ. ಕಳೆದ 10 ವರ್ಷಗಳಲ್ಲಿ ಸುಮಾರು 5,297 ಅಕ್ರಮ ಹಣ ವರ್ಗಾವಣೆ ಕೇಸನ್ನು ಇಡಿ ಸಂಸ್ಥೆ ದಾಖಲಿಸಿದೆ. ಇದರಲ್ಲಿ 40 ಕೇಸ್ ಗಳು ಮಾತ್ರ ರುಜುವಾತಾಗಿದೆ. ಇದರಲ್ಲಿ ಶೇ 97 ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ವಿರುದ್ದ ದಾಖಲಿಸಲಾಗಿದೆ. ಇದು ರಾಜಕೀಯ ಪ್ರೇರಿತವಲ್ಲವೇ? ಎಂದು ಪ್ರಶ್ನೆ ಮಾಡಿದರು.
ತನಿಖಾ ಸಂಸ್ಥೆಗಳ ದುರುಪಯೋಗ!
ಸಿದ್ದರಾಮಯ್ಯ ಅವರ ಮೇಲೆ ದೂರು ನೀಡಿದ ಟಿ.ಜೆ.ಅಬ್ರಹಾಂ ಅವರೇ ವಿಜಯೇಂದ್ರ ಅವರೇ ನೀಡಿರುವುದು ಆದರೆ ಇದುವರೆಗೂ ಕ್ರಮವಿಲ್ಲ. ಆದರೆ ಸಿದ್ದರಾಮಯ್ಯ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ವಿಜಯೇಂದ್ರ ಅವರ ಮೇಲಿನ ಪ್ರಕರಣ ಇಡಿ ಕಣ್ಣಿಗೆ ಬಿದ್ದಿಲ್ಲವೇ? ಅವರೇ ಸ್ವತಃ ಒಪ್ಪಿಕೊಂಡಿರುವಾಗ ಏಕೆ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್ ನಾಯಕರು, ಕಲ್ಕತ್ತಾ ಕಂಪೆನಿಯಿಂದ ಸುಮಾರು 12 ಕೋಟಿಗೂ ಹೆಚ್ಚು ಹಣ ವಿಜಯೇಂದ್ರ ಅವರಿಗೆ ಸಂದಾಯವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಇರುವ ಖಾತೆ ಸಂಖ್ಯೆ 50100016772791 ಯಾರದ್ದು ವಿಜಯೇಂದ್ರ ಅವರೇ? ಎಂದರು.
ರಾಜಗರನಾ ಸೇಲ್ಸ್ ಪ್ರೈ, ಲಿ, ನೌಟಂಕ್ ಪ್ರೈ, ಲಿ, ಗಣ ನಾಯಕ ಕಮಾಡಿಟಿ ಟ್ರೇಡ್, ಜಗದಾಂಭ, ರೆಮ್ಯಾಕ್ ಡಿಸ್ಟ್ರಿಬ್ಯೂಟರ್ ಕಂಪೆನಿ, ಸಕಂಬಾರಿ, ಸ್ಟಾಟ್ರಜಿಕ್ ವಿನ್ ಫ್ರಾ, ವಿಎಸ್ ಎಸ್ ಎಸ್ಟೇಟ್ ಕಂಪೆನಿಗಳು ಸೇರಿದಂತೆ ಅನೇಕ ಕಂಪೆನಿಗಳಿಗೂ ನಿಮಗೂ ಏನೂ ಸಂಬಂಧ. ಇದರಲ್ಲಿ ನಿಮ್ಮ ಕುಟುಂಬದ ಸದಸ್ಯರುಗಳೇ ಇದ್ದಾರೆ ಎಂದ ಪ್ರಿಯಾಂಕ್ ಖರ್ಗೆ, ವಿಜಯೇಂದ್ರ ಅವರ ಮೇಲೆ ಏಕೆ ಇಡಿ ಏಕೆ ಕ್ರಮ ತಗೆದುಕೊಳ್ಳುತ್ತಿಲ್ಲ. ಏಕೆಂದರೆ ಇದರ ವಿಸ್ತಾರ ಹೆಚ್ಚಿರಬಹುದು. ಯತ್ನಾಳ್ ಅವರು ಹೇಳಿದಂತೆ ಮಾರಿಷಸ್ ಸೇರಿದಂತೆ ಬೇರೆ ಕಡೆಗೂ ವಿಸ್ತಾರವಾಗಿರಬಹುದು. ಅಥವಾ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿರಬಹುದು. ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಕೆಳಗೆ ಇಳಿಯಲು ಇದೇ ಪ್ರಕರಣ ಕಾರಣ ಎಂದರು.
ಯತ್ನಾಳ್ ಅವರು ಒಂದು ಹೇಳಿಕೆ ನೀಡಿದ್ದರು. ಏಕೆ ಪದೇ, ಪದೇ ವಿಜಯೇಂದ್ರ ಅವರು ಮಾರಿಷಸ್, ದುಬೈಗೆ ಏಕೆ ಹೋಗುತ್ತಾರೆ ಎಂದಿದ್ದರು. ಇದರ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು ಎಂದ ಖರ್ಗೆ, ಕಾಂಗ್ರೆಸ್ ಸರ್ಕಾರ ಬೀಳಿಸಲು 1,200 ಕೋಟಿ ಯಾರು ತಯಾರು ಮಾಡಿಟ್ಟುಕೊಂಡಿದ್ದಾರೆ? ಯತ್ನಾಳ್ ಅವರ ಹೇಳಿಕೆಗಳನ್ನು ಗಮನಿಸಿದರೆ ಇದು ವಿಜಯೇಂದ್ರ ಅವರ ಎಂದು ಅನುಮಾನ ಬರುತ್ತದೆ. ಈ ಹಣ ಎಲ್ಲಿಂದ ಹೇಗೆ ಬಂದಿತು. ಬಿಜೆಪಿವರು ಭ್ರಷ್ಟಾಚಾರದಿಂದ ಮಾಡಿದ ದುಡ್ಡನ್ನು ವಿದೇಶದಿಂದ ತಂದು ಸರ್ಕಾರ ಬೀಳಿಸುವ ಕೃತ್ಯ ನಡೆಸುತ್ತಾರೆ ಎಂದರ್ಥವೇ? ಎಂದು ಕೇಳಿದರು.
ಯಾವುದೇ ಬಿಜೆಪಿ ನಾಯಕನಿಗೆ ಮೈಕ್ ಹಿಡಿದರು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದಷ್ಟೇ ಹೇಳುತ್ತಾರೆ. ಆದರೆ ಯಾರೂ ಸಹ ಕಾನೂನಾತ್ಮವಾಗಿ ಸ್ಪಷ್ಟವಾದ ವಿಚಾರ ಹೇಳುವುದಿಲ್ಲ ಎಂದ ಅವರು, ಸಇಎಂ ರಾಜೀನಾಮೆ ಬಗ್ಗೆ ಭವಿಷ್ಯವಾಣಿಯನ್ನು ಪ್ರಾರಂಭ ಮಾಡಿರುವ ಬಿಜೆಪಿಯವರು ದಸರಾ, ದೀಪಾವಳಿ ಆದ ನಂತರ ರಾಜಿನಾಮೆ ಎಂದು ಕಳೆದ ಒಂದುವರೆ ವರ್ಷದಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆ.
*ನೈತಿಕತೆ ಎನ್ನುವ ಹೊಸ ಪದ ಕಲಿತಿದ್ದಾರೆ*
ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎನ್ನುವ ಹೊಸ ಪದ ಕಲಿತಿರುವ ಬಿಜೆಪಿಗರು ತಮ್ಮ ನೈತಿಕತೆಯ ಬಗ್ಗೆ ಹೇಳುತ್ತಲೇ ಇಲ್ಲ. ಬೀದಿಗೆ ಇಳಿಯುತ್ತೇವೆ ಎಂದವರು ಒಮ್ಮೆಯೂ ಬೀದಿಗೆ ಇಳಿದಿಲ್ಲ. ನೈತಿಕತೆ ಬಗ್ಗೆ ಮಾತನಾಡುತ್ತಾರೆ ಎಂದರೆ ಮೊದಲು ವಿಜಯೇಂದ್ರ ಅವರು ರಾಜಿನಾಮೆ ನೀಡಬೇಕಾಗುತ್ತದೆ ಎಂದು ವಿಶ್ಲೇಷಿಸಿದ ಪ್ರಿಯಾಂಕ್ ಖರ್ಗೆ, ವಿಜಯೇಂದ್ರ ಅವರೇ ನಿಮ್ಮ ಹೇಳಿಕೆಗಳು, ನಿಲುವುಗಳನ್ನು ನೀವೇ ಪರಾಮರ್ಶನೆ ಮಾಡಿಕೊಂಡು ನಿಮ್ಮ ರಾಜಿನಾಮೆ ಬಗ್ಗೆ ಪರಿಶೀಲನೆ ಮಾಡಿ. ಮುಖ್ಯಮಂತ್ರಿಗಳ ವಿರುದ್ದ ಇಸಿಆರ್ ದಾಖಲಾಗಿದೆ ಆದ ಕಾರಣಕ್ಕೆ ರಾಜಿನಾಮೆ ಕೊಡಬೇಕು ಎನ್ನುವ ನೀವು ನಿಮ್ಮ ಬಗ್ಗೆ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ನೀವು ಹೇಗೆ ಶಾಸಕರು, ಬಿಜೆಪಿ ರಾಜ್ಯ ಅಧ್ಯಕ್ಷರು ಆಗೀದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.