ಮಂಗಳೂರು: ಪುರಾಣ ಪ್ರಸಿದ್ದ ಕಟೀಲು ಕ್ಷೇತ್ರದಲ್ಲಿಂದು ಅನನ್ಯ ಕೈಂಕರ್ಯ ನೆರವೇರಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ‘ತೆನೆ ಹಬ್ಬ’ ನೆರವೇರಿತು.
ತುಳುನಾಡಿನಲ್ಲಿ ಮುಂಗಾರು ಕೃಷಿ ಕಾಯಕ ಇದೀಗ ಬಿರುಸುಗೊಂಡಿದ್ದು, ಮಳೆಗಾಲದ ಆರಂಭದಲ್ಲಿ ಭತ್ತ ನಾಟಿ ಮಾಡಿರುವ ಗದ್ದೆಗಳಲ್ಲಿ ಬೆಳೆ ಹಂಗಾಮ ಆರಂಭವಾಗಿದೆ. ಭತ್ತದ ತೆನೆ ಕಾಣಿಸಿಕೊಂಡಿದ್ದು ಈ ಕ್ಷಣವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ತುಳುನಾಡಿನ ಶ್ರವಣದ ಹಬ್ಬವಾಗಿ ಇದನ್ನು ಆಚರಿಸಲಾಗುತ್ತದೆ.
Thene Habba at Kateelu Sri Durgaparameshwari Temple, Mangaluru. pic.twitter.com/aWdxW3As4o
— jayaa (@unsocial2023) August 29, 2022
ಬೆಳೆದ ಬೆಳೆಯನ್ನು ಕಟಾವು ಮಾಡುವ ಮುನ್ನ ಅದನ್ನು ಮಹಾಲಕ್ಷ್ಮಿ ಎಂಬಂತೆ ಪೂಜಿಸುವುದು ತುಳುನಾಡಿನದ್ದೇ ಆದ ಸಂಪ್ರದಾಯದ ಹಬ್ಬ. ಇದನ್ನು ‘ತೆನೆ ಹಬ್ಬ’ ಎಂದೂ ಕರೆಯಲಾಗುತ್ತದೆ. ಈ ‘ತೆನೆ ಹಬ್ಬ’ವು ಆಯಾ ಊರಿನ ಗ್ರಾಮ ದೇವರ ಸನ್ನಿಧಿಯಲ್ಲಿ ನಡೆದ ಬಳಿಕ ಸುತ್ತಮುತ್ತಲ ಹಳ್ಳಿಗಳ ಜನರು ಮನೆ ಮನೆಗಳಲ್ಲಿ ಆಚರಿಸುತ್ತಾರೆ. ದೇವಾಲಯದಲ್ಲಿ ತೆನೆಗಳ ರಾಶಿಗೆ ಪೂಜೆ ಸಲ್ಲಿಸಿ ಒಂದೊಂದು ತೆನೆಯನ್ನು ಭಕ್ತರಿಗೆ ಹಂಚಲಾಗುತ್ತದೆ. ದೇವರ ಪ್ರಸಾದ ರೂಪದಲ್ಲಿ ಪಡೆದ ತೆನೆಯನ್ನು ಹೊತ್ತು ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಭಕ್ತರು ದಾರಿ ಮಧ್ಯೆ, ಗದ್ದೆಗಳಿಂದ ಮತ್ತಷ್ಟು ತೆನೆಗಳನ್ನು ಸಂಗ್ರಹಿಸಿ ಒಯ್ಯುತ್ತಾರೆ. ಮನೆ ಮುಂದೆ ತುಳಸಿ ಕಟ್ಟೆಯಲ್ಲಿ ಈ ತೆನೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮನೆ ತುಂಬಿಸಿಕೊಳ್ಳಲಾಗುತ್ತದೆ. ಮನೆಯ ಪ್ರತೀ ಕೊಠಡಿ, ದನದ ಕೊಟ್ಟಿಗೆ, ಕೃಷಿ ಬಳಕೆಯ ಉಪಕರಣಗಳು, ಅಂಗಡಿಗಳು ಹೀಗೆ ತಮ್ಮ ಆದಾಯದ ಮೂಲ ಸ್ಥಾನಗಳಲ್ಲಿ ತೆನೆಯ ಗುಚ್ಛವನ್ನು ಕಟ್ಟುತ್ತಾರೆ. ಇದನ್ನು ‘ಕೊರಳ ಹಬ್ಬ’ ಎಂದೂ ಕರೆಯುತ್ತಾರೆ.
ಭಾದ್ರಪದ ಮಾಸದ ಹಸ್ತಾನಕ್ಷತ್ರದ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ‘ತೆನೆ ಹಬ್ಬ’ (ಕೊರಳುಹಬ್ಬ, ಕದಿರುಕಟ್ಟುವುದು) ಕೈಂಕರ್ಯ ಸಡಗರದಿಂದ ನೆರವೇರಿತು. ಒಂದು ವೇಳೆ ಈ ದಿನವು ಮಂಗಳವಾರ ಅಥವಾ ಶನಿವಾರ ಬಂದಲ್ಲಿ ಅದರ ಹಿಂದಿನ ದಿನ ಉತ್ತರಾನಕ್ಷತ್ರದಲ್ಲಿ ಈ ಹಬ್ಬವನ್ನು ಆಚರಿಸಬೇಕು ಎಂಬ ಸಂಪ್ರದಾಯವೂ ಇದೆ. ಅದರಂತೆ ಈ ವರ್ಷ ಉತ್ತರಾ ನಕ್ಷತ್ರ ಸಂದರ್ಭದಲ್ಲಿ ಇಂದು ಈ ಹಬ್ಬ ನೆರವೇರಿದೆ. ಈ ದಿನ ಮಧ್ಯಾಹ್ನ ನವಾನ್ನ ಭೋಜನ, ಅಂದರೆ ಹೊಸ ಅಕ್ಕಿ ಊಟ ಮಾಡುವ ಹಬ್ಬವಾಗಿ ತುಳುನಾಡಿನಲ್ಲಿ ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು.























































