ಬೆಂಗಳೂರು: ಹೊಸ ವರ್ಷ.. ಹೊಸತನದ ಹರ್ಷ.. ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆ KSRTC ನೂತನ ಕಾರ್ಯಕ್ರಮಗಳ ಮೂಲಕ ನೂತನ ವರ್ಷವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿದೆ. ಈ ಸಂಬಂಧ ಪ್ರಕ್ರಿಯೆಗಳಿಗೆ ಮುನ್ನುಡಿ ಬರೆದಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮಗಳೊಂದಿಗೆ KSRTC ಜನರಿಗೆ ಹೊಸತನದ ಪ್ರಯಾಣ ಅನುಭವ ಕರುಣಿಸಿ ಸಾಲು-ಸಾಲು ಪ್ರಶಸ್ತಿಗಳನ್ನು ಗಳಿಸಿದೆ. KSRTC ನೂತನ ವರ್ಷದಲ್ಲೂ ಜನರಿಗೆ ಹಾಗೂ ನಿಗಮದ ಸಿಬ್ಬಂದಿಗೆ ಹಿತಕರ ಕಾರ್ಯಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ನಿಗಮದ ಮುಖ್ಯಸ್ಥರು ತಿಳಿಸಿದ್ದಾರೆ.
ಅರ್ಥಪೂರ್ಣ ನಡೆ..!
ಹೊಸ ವರ್ಷದ ಆರಂಭದ ದಿನ ಕೆಎಸ್ಸಾರ್ಟಿಸಿ ಬಳಗ ಅರ್ಥಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿಗಮದಲ್ಲಿ ಸೇವೆಯಲ್ಲಿರುವಾಗ ಮೃತಪಟ್ಟ ನೌಕರರ ಕುಟುಂಬ ಸದಸ್ಯರೊಂದಿಗೆ ವರ್ಷಾರಂಭದ ದಿನವನ್ನು ಕಳೆದ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ನಿಗಮದ ಮುಖ್ಯಸ್ಥರು ಈ ಕುಟುಂಬಗಳಿಗೆ ಶಕ್ತಿ ತುಂಬಿದರು.
ಇದೇ ವೇಳೆ ಸೇವಾನಿರತರಾಗಿದ್ದಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಪತ್ನಿ ಹಾಗೂ ಅವರ ಕುಟುಂಬ ಸದಸ್ಯರ ನೋವಿನಲ್ಲಿ ಭಾಗಿಯಾದ ಸಚಿವ ರಾಮಲಿಂಗ ರೆಡ್ಡಿಯವರು, 12 ಕುಟುಂಬಗಳಿಗೆ ಒಟ್ಟು 12 ಕೋಟಿ ರೂಪಾಯಿ ವಿಮಾ ಪರಿಹಾರ ನೀಡಿದರು.
ಕಳೆದಿದ್ದೂ ಸಾಧನೆಯ ಹರ್ಷ, ಮುಂದಿನದ್ದು ‘ಪ್ರಯಾಣಿಕ ಸ್ನೇಹಿ ವರ್ಷ’
KSRTC ಯು 2024 ನೇ ವರ್ಷವನ್ನು ‘ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು “ಕಾರ್ಮಿಕ ಕಲ್ಯಾಣ ವರ್ಷ” ವೆಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ನಿಗಮದ ಪರವಾಗಿ ನಾಡಿನ ಜನರಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿರುವ ಅವರು, ನಿಗಮದ ಕಾರ್ಯಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ, ಶಕ್ತಿ ಯೋಜನೆ ಮೂಲಕ ಪ್ರಬಲಗೊಂಡಿರುವ KSRTCಗೆ ಮಹಿಳೆಯರ ‘ಶಕ್ತಿ’ ಸಿಕ್ಕಿದೆ. ಈ ಸಮರ್ಥ ಸೇವೆಯ ಜೊತೆಗೆ, ಕಳೆದ ವರ್ಷದಲ್ಲಿ ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ” ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ. ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ. ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ನಿಗಮಗಳಿಗೆ ಸ್ವಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ. ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ. ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ. ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳಷ್ಟು ಪಾವತಿಸಲಾಗುವುದು ಎಂದು ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳು ಕಿರುನೋಟ ಇಲ್ಲಿದೆ.
ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ: ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ- 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ಟ್ರಿಕ್ ಬಸ್ಸುಗಳು-500
ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕು”ಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.
1000 ವಾಹನಗಳ ಪುನಶ್ಚೇತನ ಯೋಜನೆಯ ಗುರಿ ಹೊಂದಲಾಗಿದೆ.
ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
ಮಾಹಿತಿ ತಂತ್ರಜ್ಙಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.
ಬಸ್ಸುಗಳ ಸ್ವಚ್ಚತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು
ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ / ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ
ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023 ರ ಸಾಲಿನಲ್ಲಿ 50 ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ.
ಸಾರಿಗೆ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಢೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದಿರುವ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್, ಎಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲಿದೆ ಎಂದು ಭರವಸೆ ನೀಡಿದ್ದಾರೆ.