ಬೆಂಗಖೂರು: ರಾಜ್ಯ ಸರ್ಕಾರ ಮಾಡ ಹೊರಟಿರುವ 216 ಗ್ಯಾರಂಟಿ ಕಮಿಟಿಗಳ ಯೋಜನೆ ಅತ್ಯಂತ ವಿನಾಶಕಾರಿ ಯೋಜನೆಯಾಗಲಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಘೋಷಣೆಗೆ ಆಕ್ಷೇಪಿಸಿರುವ ಅವರು, ರಾಜ್ಯದ ತೆರಿಗೆದಾರರ ಹಣ ಇರುವುದು ರಾಜ್ಯದ ಜನತೆಯ ಕಲ್ಯಾಣಕ್ಕಾಗಿಯೋ ಅಥವಾ ಕಾಂಗ್ರೆಸ್ ಕಾರ್ಯಕರ್ತರ ಕಲ್ಯಾಣಕ್ಕಾಗಿಯೋ? ಎಂದು ಪ್ರಶ್ನಿಸಿದ್ದಾರೆ.
ನೀಲಿ ನಕ್ಷೆ ಎಂದು ಹೇಳಲಾಗುತ್ತಿರುವ ಈ ಕ್ರಮ ಜವಾಬ್ದಾರಿ ರಹಿತ ಅಧಿಕಾರವನ್ನು (Power without responsibility) ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹೊರಟಿರುವ ಒಂದು ವಿವೇಚನಾರಹಿತ ಕ್ರಮ ಎಂದಿರುವ ಸುರೇಶ್ ಕುಮಾರ್, ರಾಜ್ಯದ ಬೊಕ್ಕಸಕ್ಕೆ ಮಾರಕವಾಗಲಿರುವ ಈ ರೀತಿಯ ಯೋಜನೆಯ ಕಲ್ಪನೆಯನ್ನು ನೀಡಿರುವುದು ಮುಖ್ಯಮಂತ್ರಿಗಳ ಅಸಂಖ್ಯಾತ ಸಲಹೆಗಾರರ ಪೈಕಿ ಯಾವ ಸಲಹೆಗಾರನೋ ತಿಳಿಯದು ಎಂದಿದ್ದಾರೆ.
ಕರ್ನಾಟಕದ ಈ ನೂತನ ಪುನರ್ವಸತಿ ಯೋಜನೆ ರಾಜ್ಯಕ್ಕೆ ವಿವಿಧ ರೀತಿಯಲ್ಲಿ ಮಾರಕವಾಗುವುದು ಗ್ಯಾರಂಟಿ. ಕಾಂಗ್ರೆಸ್ ಪಕ್ಷ ಅಧ:ಪತನಕ್ಕೆ ಜಾರುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜನತೆ ಈ ರೀತಿಯ ದೊಂಬರಾಟಕ್ಕೆ ಸರಿಯಾದ ಪಾಠ ಕಲಿಸುವುದು ನಿಶ್ಚಿತ ಎಂದಿರುವ ಅವರು, ಕಾಂಗ್ರೆಸ್ ಪಕ್ಷದ ಕಥೆ ಒಂದು ಕಡೆ ಇರಲಿ. ಇದರಿಂದ ರಾಜ್ಯದ ಅಭಿವೃದ್ಧಿಗೆ ಬಂದೆರಗುವ ಆತಂಕದ ಕುರಿತು ಯೋಚಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನೇ ನೀಲಿ ನಕ್ಷೆ ಜಾರಿಗೆ ತಂದರೂ ಸಹ ಜನರು ಮೋದಿಯವರನ್ನು ಮೂರನೆಯ ಬಾರಿ ಪ್ರಧಾನಿ ಮಾಡುವುದು ಗ್ಯಾರಂಟಿ ಎಂದು ಸುರೇಶ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

















































