ಉಡುಪಿ: ಲೋಕಸಭಾ ಚುನಾವಣಾ ಅಖಾಡ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಕರಾವಳಿ ಮಲೆನಾಡಿನ ನಾಲ್ಕು ಕ್ಷೇತ್ರಗಳು ಕೂಡಾ ಜಾತಿ ಸಮೀಕರಣದ ಮೇಲೆ ನಿಂತಿರುವುದು ಅಚ್ಚರಿಯ ಬೆಳವಣಿಗೆ.
ಕರಾವಳಿ-ಮಲೆನಾಡಿಗೆ ಹೊಂದಿಕೊಂಡಿರುವ ಬಹುತೇಕ ಲೋಕಸಭಾ ಕ್ಷೇತ್ರಗಳು ಈವರೆಗೂ ಬಿಜೆಪಿಯ ಹಿಡಿತಲ್ಲಿವೆ. ಅದರಲ್ಲೂ ಕರಾವಳಿಗೆ ಹೊಂದಿಕೊಂಡಿರುವ ನಾಲ್ಕು ಲೋಕಸಭಾ ಕ್ಷೇತ್ರಗಳು ಹಿಂದೂತ್ವದ ಪ್ರಾಬಲ್ಯದಿಂದಾಗಿ ಬಿಜೆಪಿಯ ಭದ್ರಕೋಟೆಯಾಗಿವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಬಿಲ್ಲವ-ಈಡಿಗ ಸಮುದಾಯಗಳ ಮತಗಳೇ ನಿರ್ಣಾಯಕವಾಗಿವೆ.
ಈ ಕ್ಷೇತ್ರಗಳಲ್ಲಿ ಬಿಲ್ಲವ ಮತಗಳನ್ನು ಸೆಳೆಯಲು ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹರಸಾಹಸ ನಡೆಸುತ್ತಿವೆ. ಈ ಕ್ಷೇತ್ರಗಳು ಬಿಲ್ಲವ ಪ್ರಾಬಲ್ಯದ ಕ್ಷೇತ್ರಗಳಾಗಿದ್ದರೂ ಈ ಸಮುದಾಯವು ಹಿಂದೂತ್ವದ ಬಗ್ಗೆ ಒಲವುಳ್ಳದ್ದೆಂಬ ಮಾತುಗಳಿದ್ದವು. ಅಷ್ಟೇ ಅಲ್ಲ, ಬಿಲ್ಲವರಿಗೆ ಸ್ಪರ್ಧೆಗೆ ಅವಕಾಶವೂ ಸಿಲ್ಲಿರಲಿಲ್ಲ. ಆದರೆ ಈ ಬಾರಿಯ ಪರಿಸ್ಥಿತಿ ಹಿಂದಿನಂತಿಲ್ಲ. ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಹುರಿಯಾಳಾಗಿ ಬಿಲ್ಲವ ಸಮುದಾಯದ ಪದ್ಮರಾಜ್ ರಾಮಯ್ಯ ಅವರು ಕಣದಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು ಬಿಲ್ಲವ ಸಮುದಾಯದವರು. ಮತ್ತೊಂದೆಡೆ, ಬೈಂದೂರು ವಧಾನಸಭಾ ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಸಸಭಾ ಕ್ಷೇತ್ರದಲ್ಲಿ ಬಿಲ್ಲವ-ಈಡಿಗ ಸಮುದಾಯದ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ಸಮುದಾಯದವರನ್ನೇ ಗೆಲ್ಲಿಸಲು ಬಿಲ್ಲವ ಸಂಘಟನೆಗಳು ಶಕ್ತಿಮೀರಿ ಪ್ರುಯತ್ನಿಸುತ್ತಿವೆ.
ಈ ಮಧ್ಯೆ, ಬಿಲ್ಲವ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷದ ಪಾಲಾಗದಂತೆ ಬಿಜೆಪಿ ಹರಸಾಹಸ ನಡೆಸುತ್ತಿದೆ. ಈ ಸಂಬಂಧ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿಗೋವಿಂದ ಬಾಬು ಪೂಜಾರಿ ಅವರು ಸರಣಿ ಸಭೆಗಳನ್ನು ನಡೆಸಿ ಬಿಜೆಪಿ ಮತಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಉಡುಪಿ-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕುಂದಾಪುರ, ಕಾರ್ಕಳ ಸಹಿತ ಹಲವೆಡೆ ಭಾನುವಾರ ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರ ಸಭೆ ನಡೆಸಿದ ಗೋವಿಂದ ಬಾಬು ಪೂಜಾರಿ, ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶಕ್ಕೆ ಮೋದಿ ಸರ್ಕಾರದ ಅನಿವಾರ್ಯತೆ ಬಗ್ಗೆ ಸಮುದಾಯದ ಮುಖಂಡರಿಗೆ ಮನವರಿಕೆ ಮಾಡದ್ದಾರೆ.
ಸೋಮವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಬಿಲ್ಲವ ಸಂಘಟನೆಗಳ ಮುಖಂಡರ ಸಭೆ ನಡೆಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಈ ಬಾರಿಯ ಚುನಾವಣೆಯು ಜಾತಿ-ಸಮುದಾಯದ ವಿಚಾರವಲ್ಲ. ಬದಲಾಗಿ ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ವಿಚಾರವಾಗಿದೆ ಎಂದು ಗೋವಿಂದ ಪೂಜಾರಿ ಮನವರಿಕೆ ಮಾಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಬಿಲ್ಲವರ ಮನವೊಲಿಕೆ ಯಶಸ್ವಿ:
ದಕ್ಷಿಣ ಕನ್ನಡ ಜಿಲ್ಕೆಯಲ್ಲಿ ಬಿಜೆಪಿಯಿಂದ ವಿಮುಖವಾಗಿದ್ದ ಬಿಲ್ಲವ ಸಮುದಾಯದವರ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ. ದಕ್ಷಿಣ. ಕನ್ನಡ ಜಿಲ್ಲೆಯ ಬಿಲ್ಲವರಲ್ಲಿ ಬಿಜೆಪಿ ಬಗ್ಗೆ ಆರಂಭದಲ್ಲಿ ಇದ್ದ ಅಸಮಾಧಾನ ಈಗ ತಿಳಿಯಾಗಿದೆ. ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಬೇಕೆಂಬ ಬಗ್ಗೆ ಬಿಲ್ಲವ ಯುವಕರು ಒಲವು ಹೊಂದಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಗೋವಿಂದ ಬಾಬು ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.