ಬೆಂಗಳೂರು: ನೆರವಿನ ಹಸ್ತ ಚಾಚುತ್ತಾ ಮನುಕುಲಕ್ಕೆ ಮಾರ್ಗದರ್ಶಿಯಾಗುತ್ತಿರುವ ಜನಾನುರಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಇದೀಗ ಮತ್ತೆ ಸುದ್ದಿಯ ಮುನ್ನಲೆಗೆ ಬಂದಿದ್ದಾರೆ.
ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ಬೆಂಗಳೂರಿನ ChrlefTalk ಸಂಸ್ಥೆಯ ಮುಖ್ಯಸ್ಥ, ಕರಾವಳಿ ಮೂಲದ ಉದ್ಯಮಿ ಡಾ.ಗೋವಿಂದ ಪೂಜಾರಿಯವರು ಅಸಹಾಯಕ ಮಗುವೊಂದಕ್ಕೆ ಪುನರ್ಜನ್ಮ ಕಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ತಲೆಸೇಮಿಯಾ ಕಾಯಿಲೆಯಿಂದ ಸಾವು ಬದುಕಿನೊಂದಿಗೆ ಹೋರಾಡುತಿದ್ದ ಮಗುವನ್ನು ತನ್ನ ಮನೆಗೇ ಕರೆದೊಯ್ದು, ಆಸ್ಪತ್ರೆ ವೈದ್ಯರ ಮೂಲಕ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಿ ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯವನ್ನು ಪ್ರಶಂಸಿರುವ ಜನ ಗೋವಿಂದ ಪೂಜಾರಿ ಅವರನ್ನು ದೇವಮಾನವ ಎಂದೇ ಬಣ್ಣಿಸುತ್ತಿದ್ದಾರೆ.
ಕರಾವಳಿ ಮೂಲದ ಮಗುವೊಂದು ಮಾರಣಾಂತಿಕ ತಲೆಸೇಮಿಯಾ ಕಾಯಿಲೆಯಿಂದಾಗಿ ಸಾವು ಬದುಕಿನೊಂದಿಗೆ ಹೋರಾಡುತಿತ್ತು. ಹಲವು ವೈದ್ಯರ ಬಳಿ ಪರಿಶೀಲಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ತೆರಳಿದಾಗ ಅಲ್ಲೂ ಮಗುವಿನ ಹೆತ್ತವರಿಗೆ ಶಾಕ್ ಎದುರಾಯಿತು. ಈ ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗಲುತ್ತದೆ ಎಂದು ವೈದ್ಯರು ಹೇಳಿದಾಗ ಪೋಷಕರು ದಿಕ್ಕು ತೋಚದಂತಾದರು.
ಈ ಬಗ್ಗೆ ಮಾಹಿತಿ ತಿಳಿದಿದ್ದೇ ತಡ, ಆಪತ್ಪಾಂಧವನಂತೆ ನೆರವಿಗೆ ಧಾವಿಸಿದ ಡಾ.ಗೋವಿಂದ ಬಾಬು ಪೂಜಾರಿಯವರು, ಈ ಮಗುವಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಈ ಮಗುವನ್ನು ಹೆತ್ತವರೊಂದಿಗೆ ಬೆಂಗಳೂರಿಗೆ ಕರೆಸಿಕೊಂಡು, 6 ತಿಂಗಳು ತನ್ನ ಮನೆಯಲ್ಲೇ ಇರಿಸಿಕೊಂಡು ಆಸರೆ ಕಲ್ಪಿಸಿದರು. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗುಂತೆ ಒಂದು ಕಾರ್ ಮತ್ತು ಚಾಲಕನನ್ನು ನೇಮಿಸಿದರು. ಎಲ್ಲಾ ರೀತಿಯ ವ್ಯವಸ್ತೆ ನೀಡಿ, ಚಿಕಿತ್ಸೆಯ ವೆಚ್ಚವನ್ನೂ ತಮ್ಮ ಮುಂದಾಳತ್ವದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಭರಿಸಿ ಮಗು ಗುಣವಾಗುವವರೆಗೂ ಪೂಜಾರಿಯವರು ವಿರಮಿಸಲಿಲ್ಲ.
ಇದೀಗ ಮಗು ಚೇತರಿಸಿಕೊಂಡಿದ್ದು ಹೆತ್ತವರ ಪಾಳಯದಲ್ಲಿ ಸಂತಸ ಮನೆಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ಹೆತ್ತವರು, ಗೋವಿಂದ ಬಾಬು ಪೂಜಾರಿಯಿಂದಾಗಿ ನಮ್ಮ ಮಗುವಿಗೆ ಪುನರ್ಜನ್ಮ ಸಿಕ್ಕಿದೆ ಎಂದಿದ್ದಾರೆ.
ಸುಮಾರು 6 ತಿಂಗಳು ಮಗುವನ್ನು ತನ್ನ ಮನೆಯಲ್ಲಿ ಇರಿಸಿಕೊಂಡು, ಶಸ್ತ್ರಚಿಕಿತ್ಸೆ ಕೊಡಿಸಿ, ಊರು ಬೈಂದೂರಿಗೆ ಕರೆದೊಯ್ದಾಗ ಅಲ್ಲೂ ಅಚ್ಚರಿಯ ಸನ್ನಿವೇಶ. ಮಗುವಿನ ಜೀವ ಉಳಿಸಿದ ದೇವಪುರಷನನ್ನು ಬೈಂದೂರಿನ ಯುವಕರು ಸ್ವಾಗತಿಸಿ ಅಭಿನಂದಿಸಿದ ಸನ್ನಿವೇಶವು ಅಪರೂಪದಲ್ಲಿ ಅಪರೂಪದಂತಿತ್ತು. ಅನನ್ಯ ಸನ್ನಿವೇಶಕ್ಕೂ ಇದು ಸಾಕ್ಷಿಯಾಯಿತು.