ಬೆಂಗಳೂರು: ಬೆಂಗಳೂರು ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರವು ಶಿಕ್ಷಣ, ಆರೋಗ್ಯ, ರಸ್ತೆ, ಒಳಚರಂಡಿ ವ್ಯವಸ್ಥೆ, ಕಸ ವಿಗಂಡಣೆ ಹೀಗೆ ಹತ್ತು ಹಲವು ಜನಸ್ನೇಹಿ ಕ್ರಮಗಳಿಂದಾಗಿ ರಾಜ್ಯದ ಗಮನಸೆಳೆದಿದೆ. ರಾಜ್ಯದಲ್ಲೇ ಮಾದರಿ ವಿಧಾನಸಭಾ ಕ್ಷೇತ್ರ ಎಂಬಂತೆ ಗಮನಸೆಳೆದಿದೆ.
ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲಾ/ಕಾಲೇಜುಗಳು ದೇಶದ್ಯಾಂತ ಸುದ್ದಿಯಾಗಿವೆ. ಶಿಕ್ಷಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಈ ಬೆಳವಣಿಗೆಗೆ ಲಂಗಾಣ ಶಿಕ್ಷಣ ಸುಧಾರಣಾ ಆಯೋಗದ ಅಧ್ಯಕ್ಷರಾದ ನಿವೃತ್ತ IAS ಅಧಿಕಾರಿ ಎ ಮುರಳಿ ಅವರ ಮೆಚ್ಚುಗೆಯ ಪತ್ರ ಸಾಕ್ಷಿಯಾಗಿದೆ. ಈ ಮೆಚ್ಚುಗೆಯ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದಲೂ ಶಾಸಕ ರಾಮಲಿಂಗಾ ರೆಡ್ಡಿ ಅವರ ಪ್ರಯತ್ನಕ್ಕೆ ಅಭಿನಂದನೆಗಳ ಮಹಾಮಳೆಯಾಗುತ್ತಿದೆ.

ತೆಲಂಗಾಣ ಶಿಕ್ಷಣ ಸುಧಾರಣಾ ಆಯೋಗದ ಅಧ್ಯಕ್ಷ ಎ ಮುರಳಿಯವರು ಕರ್ನಾಟಕಕ್ಕೆ ಭೇಟಿನೀಡಿ, ಅದರಲ್ಲೂ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪಡಿಸಿರುವ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಪರಿಶೀಲಿಸಿ, ತೆಲಂಗಾಣ ರಾಜ್ಯದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಈ ಭೇಟಿ ಕೈಗೊಂಡಿದ್ದರು. ಅವರ ಭೇಟಿಯ ಒಂದು ಭಾಗವಾಗಿ ಆಡುಗೋಡಿ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಗಣ್ಯರ ಭೇಟಿಯ ಪುಸ್ತಕದಲ್ಲಿ ಅವರು ತಮ್ಮ ಕೈಬರಹದಲ್ಲಿ ದಾಖಲಿಸಿರುವ ಪದಗಳು ಕುತೂಹಲದ ಕೇಂದ್ರಬಿಂದುವಾಗಿದೆ.
ಆಡುಗೋಡಿ ಸರ್ಕಾರಿ ‘ಶಾಲೆಯ ಸುಂದರ ವ್ಯವಸ್ಥೆಯನ್ನು ನೋಡಿ ತುಂಬ ಸಂತೋಷವಾಗಿದೆ, ಈ ಶಾಲೆಯಿಂದ ನಾನು ಅನೇಕ ಉತ್ತಮ ಕ್ರಮಗಳನ್ನು ಕಲಿತುಕೊಂಡಿದ್ದೇನೆ ಎಂಬುದನ್ನು ಹಂಚಿಕೊಳ್ಳಲು ಸಂತೋಷಪಡುತ್ತೇನೆ.
ಈ ಕ್ಷೇತ್ರದ ಎಲ್ಲಾ ಶಾಲೆಗಳ ರೂಪುಗೊಳಿಸುವಿಕೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಹೃದಯ ಮತ್ತು ಮನಸ್ಸಿನಿಂದ ತೊಡಗಿಸಿಕೊಂಡಿರುವುದು ತಿಳಿದು ಇನ್ನೂ ತುಂಬ ಸಂತೋಷವಾಗಿದೆ’ ಎಂದು ಎ ಮುರಳಿಯವರು ಬರೆದುಕೊಂಡಿದ್ದಾರೆ.
ಈ ವಿಧಾನ ಸಭಾ ಕ್ಷೇತ್ರದ ಎಲ್ಲಾ ಶಾಲೆಯ ಅಧಿಕಾರಿಗಳು, ಮುಖ್ಯಸ್ಥರು ಮತ್ತು ಪ್ರಾಂಶುಪಾಲರನ್ನು, ಎಲ್ಲಾ ಶಿಕ್ಷಕರನ್ನು ಮತ್ತು ಮಕ್ಕಳನ್ನು ಅವರು ಅಭಿನಂಧಿಸಿದ್ದಾರೆ.
ಖಾಸಗಿ ಕಾರ್ಪೋರೆಟ್ ಶಾಲೆಗಳಿಗೂ ಕಮ್ಮಿ ಇಲ್ಲ!
ಬಿ.ಟಿ.ಎಂ ಕ್ಷೇತ್ರದ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಕಾರ್ಪೋರೆಟ್ ಶಾಲೆಗಳಿಗೂ ಕಮ್ಮಿ ಇಲ್ಲದಂತೆ, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಕಂಪ್ಯೂಟರ್ ಲ್ಯಾಬ್ ಗಳು, ಸುಸಜ್ಜಿತ ಶಾಲಾ ಕೊಠಡಿಗಳು, ಮೇಜು, ಶೌಚಾಲಯ ವ್ಯವಸ್ಥೆ, ಉಚಿತ ಬ್ಯಾಗು, ಸಮವಸ್ತ್ರ, ನೋಟ್ ಬುಕ್, ಕ್ರೀಡಾಂಗಣ, ಅಡಿಟೋರಿಯಂ, ಉತ್ತಮ ದರ್ಜೆಯ ಶಿಕ್ಷಕ ವೃಂದ, ಅತ್ಯುತ್ತಮ ಪರೀಕ್ಷಾ ಫಲಿತಾಂಶ ಹೀಗೆ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರೆ ಬಡವರ, ಜನ ಸಾಮಾನ್ಯರ ಮಕ್ಕಳಿಗೂ ಉನ್ನತ ದರ್ಜೆಯ ಸೌಲಭ್ಯವನ್ನು ಕಲ್ಪಿಸಬಹುದು ಎಂಬಂತಿದೆ. ಈ ಸುಧಾರಣೆಗೆ ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ರವರ ಕಾರ್ಯವೈಖರಿ ಕಾರಣ.

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, 23 ಸರ್ಕಾರಿ ಶಾಲಾ/ಕಾಲೇಜುಗಳು, ಸರ್ಕಾರಿ ಅನುದಾನಿತ ಶಾಲೆಗಳು, ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ ಕಾನ್ವೆಂಟ್ ಶಾಲೆಗಳು ಇವೆ. ಬಡವರ, ಜನಸಾಮಾನ್ಯರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯವನ್ನು ಒದಗಿಸಬೇಕು ಎನ್ನುವ ಶಾಸಕರ ಕಾಳಜಿ ಈ ಶಾಲೆಯ ಸ್ಥಿತಿಗತಿಯಲ್ಲಿ ಪ್ರತಿಬಿಂಭಿಸಿದೆ.
























































