ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್ 9ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ.
ಡಿಸೆಂಬರ್ 9 ಕ್ಕೆ ಸುವರ್ಣ ವಿಧಾನ ಸೌಧಕ್ಕೆ ಲಕ್ಷಾಂತರ ಪಂಚಮಸಾಲಿಗಳಿಂದ ಪಂಚಮಸಾಲಿ ವಕೀಲರ ನೇತೃತ್ವದಲ್ಲಿ ಹಾಗೂ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ 2a ಹಾಗೂ ಲಿಂಗಾಯತ ಉಪಸಮಾಜಗಳ OBC ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡದ ಕಾರಣ ಈ ಹೋರಾಟ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧ ಅಧಿವೇಶನಕ್ಕೆ ಮುಂಚಿತವಾಗಿ ಪಂಚಮಸಾಲಿ ಮೀಸಲಾತಿ ಘೋಷಿಸಬೇಕೆಂದು ಹಕ್ಕೊತ್ತಾಯಿಸಿ ಡಿಸೆಂಬರ್ 9ರಂದು ಸೋಮವಾರ ಬೆಳಿಗ್ಗೆ 10 ಕ್ಕೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಸಲಾಗುತ್ತದೆ. ವಕೀಲರ ನೇತೃತ್ವದಲ್ಲಿ ಪಂಚಮಸಾಲಿ-ಮಲೆಗೌಡ-ಗೌಡ ದೀಕ್ಷಾ ಲಿಂಗಾಯತರಿಂದ ಸುವರ್ಣ ವಿಧಾನ ಸೌಧಕ್ಕೆ ಬೃಹತ್ ಟ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಕ್ಟೊಬರ್ 18 ರಂದು ಮುಖ್ಯಮಂತ್ರಿಗಳು ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಎರಡು ಗಂಟೆಗಳ ಸುಧೀರ್ಘ ಸಭೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ. ನೀತಿ ಸಂಹಿತೆ ಕಾರಣ ಹೇಳಿದ ಸಿಎಂ ರವರು ಶಿಗ್ಗಾವಿ ಉಪಚುನಾವಣೆ ಮುಗಿದ ನಂತರದಲ್ಲಿಯಾದರು ಕೇಂದ್ರ OBC ಮೀಸಲಾತಿಗಳಾದರೂ ಶಿಫಾರಸ್ಸು ಮಾಡಿ ಎಂದು ವಕೀಲರರೆಲ್ಲಾರೂ ಮನವಿ ಮಾಡಿದರೂ ಸಹ ಒಪ್ಪಲಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 9ರ ಸುವರ್ಣ ಸೌಧ ಮುತ್ತಿಗೆ ಹೋರಾಟದಲ್ಲಿ 10 ಲಕ್ಷ ಪಂಚಮಸಾಲಿ ಸಮುದಾಯದವರು, 10 ಸಾವಿರ ವಕೀಲರು, 5 ಸಾವಿರ ಟ್ಯಾಕ್ಟರ್‌ಗಳಲ್ಲಿ ರೈತರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.