ಬೆಂಗಳೂರು: ರಾಜ್ಯಸಭೆ ಚುನಾವಣೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ವಿಧಿ ನಮ್ಮಿಂದ ದೂರ ಮಾಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಿವಕುಮಾರ್, ಮಾಧ್ಯಮಗಳ ಜತೆ ಮಾತನಾಡಿ “ಇಂದು ನನ್ನ ಜೀವನದ ದುಃಖದ ದಿನ. ಮೂರ್ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಸೋಮಶೇಖರ್ ಅವರ ಜತೆಗೂಡಿ ಆಸ್ಪತ್ರೆಗೆ ಬಂದು ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿದ್ದೆ. ಅವರು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಕಾಗದದ ಮೇಲೆ ಬರೆದು ನನ್ನ ಜತೆ ಮಾತನಾಡಿದ್ದರು. ರಾಜ್ಯಸಭೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದರು ಎಂದರು.
ಅವರು ವಾಪಸ್ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಇಂದು ಮಧ್ಯಾಹ್ನ ಭಗವಂತ ಅವರನ್ನು ಕರೆದುಕೊಂಡಿದ್ದಾನೆ. ನಾವು ಮಾಡಿದ ಸಮೀಕ್ಷೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಇವರೇ ಮೊದಲ ಅಭ್ಯರ್ಥಿ ಎಂದು ಕೂಡ ವರದಿಯಲ್ಲಿ ವ್ಯಕ್ತವಾಗಿತ್ತು. ವಿಧಿಲೀಲೆ ಅವರನ್ನು ನಮ್ಮಿಂದ ದೂರ ಮಾಡಿದೆ ಎಂದು ನೋವು ಹಂಚಿಕೊಂಡರು.
ಬಹಳ ಸರಳತೆಯ ನಾಯಕರಾಗಿದ್ದ ಅವರು ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಆಮೂಲಕ ಜನರ ಮನ ಗೆದ್ದಿದ್ದರು. ನನಗೆ ಆತ್ಮೀಯ ಸ್ನೇಹಿತರೂ ಆಗಿದ್ದರು. ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದ ಡಿಕೆಶಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಕ್ಷೇತ್ರದ ಜನರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸುರಪುರ ಕ್ಷೇತ್ರದ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರು ಇಂದು ನಿಧನರಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. pic.twitter.com/EJfDmgg84W
— DK Shivakumar (@DKShivakumar) February 25, 2024