ಮಂಗಳೂರು/ಉಡುಪಿ: ಬೇಸಿಗೆಯ ಬಿರು ಬಿಸಿಲಿನಿಂದಾಗಿ ಜನ ತತ್ತರಿಸಿದ್ದಾರೆ. ರಾಜ್ಯದಾದ್ಯಂತ ತಾಪಮಾನ ಹೆಚ್ಚಾಗಿದ್ದು ಜನರು ಮನೆಯಿಂದ ಹೊರಬಾರದ ಸ್ಥಿತಿ ಎದುರಾಗಿದೆ.
ಮಂಗಳೂರು-ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಬಿರು ಬಿಸಿಲಿನಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಇದೇ ಸಂದರ್ಭದಲ್ಲಿ ಉಡುಪಿಯಲ್ಲಿ ಬಿಸಿಲ ಹೊಡೆತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಸುಮಾರು 37 ವರ್ಷದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತರನ್ನು ಬದಿಯಪ್ಪ ಎಂದು ಗುರುತಿಸಲಾಗಿದೆ. ಕುಸಿದು ಬಿದ್ದ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಅವರು ಬದುಕುಳಿಯಲಿಲ್ಲ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.