ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಹೋರಾತ್ರಿ ಧರಣಿ ಇಂದಿಗೆ 34 ದಿನ ಪೊರೈಸಿದೆ, ಆದರೂ ಸರ್ಕಾರ ರೈತರ ಬಗ್ಗೆ ಅನುಕಂಪ ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಡಿಸೆಂಬರ್ 26ರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಕಳೆದ ಹತ್ತು ದಿನದ ಹಿಂದೆ ಧರಣಿ ನಿರತ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಕಬ್ಬಿನ ದರ ಏರಿಕೆ ಭರವಸೆ ನೀಡಿದ್ದರು, ಆದರೆ ಈ ತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ, ಹಾಗಾಗಿ ನಾಳೆಯಿಂದ (ಡಿ.26) ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆರಂಭದಲ್ಲಿ ನಾಳೆ ಐವರು ರೈತರು ಮಾತ್ರ ಉಪವಾಸ ಸತ್ಯಾಗ್ರಹ ಕೈಗೊಂಡು ಉಳಿದ ರೈತರು ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಲಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
























































