ನವದೆಹಲಿ: ಯುಕೆಯ ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ, ಒಮೆಗಾ–3 ಕೊಬ್ಬಿನಾಮ್ಲಗಳು ಮಹಿಳೆಯರನ್ನು ಆಲ್ಝೈಮರ್ ಕಾಯಿಲೆಯಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬ ಸೂಚನೆ ಸಿಕ್ಕಿದೆ.
ರಕ್ತದಲ್ಲಿನ 700ಕ್ಕೂ ಹೆಚ್ಚು ಲಿಪಿಡ್‌ಗಳನ್ನು ವಿಶ್ಲೇಷಿಸಿದ ಅಧ್ಯಯನದಲ್ಲಿ, ಆಲ್ಝೈಮರ್‌ನಿಂದ ಬಳಲುತ್ತಿದ್ದ ಮಹಿಳೆಯರ ರಕ್ತದಲ್ಲಿ ಆರೋಗ್ಯಕರ ಮಹಿಳೆಯರಿಗಿಂತ ಒಮೆಗಾ ಕೊಬ್ಬಿನಾಮ್ಲಗಳನ್ನು ಹೊಂದಿರುವ ಲಿಪಿಡ್‌ಗಳು ತೀವ್ರವಾಗಿ ಕಡಿಮೆಯಾಗಿದ್ದವು ಎಂದು ಕಂಡುಬಂದಿದೆ. ಆದರೆ ಪುರುಷರಲ್ಲಿ ಇಂತಹ ವ್ಯತ್ಯಾಸ ಕಂಡುಬರಲಿಲ್ಲ.
“ಮಹಿಳೆಯರು ಆಲ್ಝೈಮರ್‌ನಿಂದ ಹೆಚ್ಚಾಗಿ ಬಳಲುವ ಒಂದು ಕಾರಣವೇ ಇವರಲ್ಲಿ ಲಿಪಿಡ್ ರಚನೆಯಲ್ಲಿ ಉಂಟಾಗುವ ಈ ಬದಲಾವಣೆ ಆಗಿರಬಹುದು” ಎಂದು ಕಿಂಗ್ಸ್ ಕಾಲೇಜಿನ ಸಂಶೋಧಕಿ ಡಾ. ಕ್ರಿಸ್ಟಿನಾ ಲೆಗಿಡೊ-ಕ್ವಿಗ್ಲೆ ವಿವರಿಸಿದ್ದಾರೆ.
ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳಲು ಕೊಬ್ಬುಗಳು ಅತ್ಯಂತ ಮುಖ್ಯವಾದದ್ದು. ಆದರೆ ಆಲ್ಝೈಮರ್ ಇರುವ ಮಹಿಳೆಯರಲ್ಲಿ ‘ಅನಾರೋಗ್ಯಕರ’ ಸ್ಯಾಚುರೇಟೆಡ್ ಲಿಪಿಡ್‌ಗಳ ಪ್ರಮಾಣ ಹೆಚ್ಚಾಗಿರುವುದು ಹಾಗೂ ‘ಆರೋಗ್ಯಕರ’ ಒಮೆಗಾ ಲಿಪಿಡ್‌ಗಳ ಪ್ರಮಾಣ ತೀವ್ರವಾಗಿ ಕುಸಿದಿರುವುದು ಗಮನಿಸಲಾಯಿತು.
ಈ ಅಧ್ಯಯನವು “Alzheimer’s & Dementia: The Journal of the Alzheimer’s Association” ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಲಿಪಿಡ್ ಜೀವಶಾಸ್ತ್ರವು ಲಿಂಗಾನುಸಾರ ವಿಭಿನ್ನ ಪಾತ್ರ ವಹಿಸಬಹುದು ಎಂಬುದನ್ನು ಬಹಿರಂಗಪಡಿಸಿದೆ.
ವಿಜ್ಞಾನಿಗಳ ಅಭಿಪ್ರಾಯದಲ್ಲಿ, ಮಹಿಳೆಯರು ತಮ್ಮ ಆಹಾರದಲ್ಲಿ ಕೊಬ್ಬಿನ ಮೀನುಗಳು ಅಥವಾ ಪೂರಕಗಳ ಮೂಲಕ ಒಮೆಗಾ ಕೊಬ್ಬಿನಾಮ್ಲಗಳನ್ನು ನಿಯಮಿತವಾಗಿ ಪಡೆದುಕೊಳ್ಳುವುದು ಉತ್ತಮ. ಆದಾಗ್ಯೂ, ಇದು ನಿಜವಾಗಿಯೂ ಆಲ್ಝೈಮರ್ ತಡೆಯಲು ಸಹಾಯವಾಗುತ್ತದೆಯೇ ಎಂಬುದನ್ನು ದೃಢೀಕರಿಸಲು ಇನ್ನಷ್ಟು ಕ್ಲಿನಿಕಲ್ ಪ್ರಯೋಗಗಳು ಅಗತ್ಯವಿದೆ.