ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಇಂದು ಭಾರೀ ಪ್ರತಿಭಟನೆಗೆ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಮಂಗಳೂರು ಹೊರವಲಯದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿತ್ತು.
ಬಾಲಕ ನಾಪತ್ತೆಯಾಗಿ ಐದು ದಿನ ಕಳೆದರೂ ಆತನ ಸುಳಿವು ಸಿಕ್ಕಿಲ್ಲ. ನಾಪತ್ತೆಯಾದ ವಿದ್ಯಾರ್ಥಿ ದಿಗಂತ್ನನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದಿವೆ. ವಿಶ್ವ ಹಿಂದೂ ಪರಿಷತ್ ನೀಡಿರುವ ಹೋರಾಟವನ್ನು ಬೆಂಬಲಿಸಿ ಹಲವು ಅಂಗಡಿ ಮಾಲೀಕರು ವಹಿವಾಟು ಸ್ಥಗಿತ ಗೊಳಿಸಿದ್ದರು. ಇದರಿಂದಾಗಿ ಶನಿವಾರ ಬೆಳಿಗ್ಗೆ ಫರಂಗಿಪೇಟೆ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂತು.
ಮಂಗಳೂರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ದಿಗಂತ್, ಫೆ.25ರಂದು ರಾತ್ರಿ 7 ಗಂಟೆ ಸುಮಾರಿಗೆ ಫರಂಗಿಪೇಟೆ ಅಂಜನೇಯ ವ್ಯಾಯಮ ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ. ಆದರೆ ಮತ್ತೆ ವಾಪಾಸ್ ಆಗಿಲ್ಲ. ಸಮೀಪದ ರೈಲ್ವೆ ಹಳಿಯಲ್ಲಿ ದಿಗಂತ್’ನದ್ದೆನ್ನಲಾದ ರಾಕ್ಸ್ಟಾಸಿಕ್ತ ಚಪ್ಪಲಿ ಹಾಗೂ ಮೊಬೈಲ್ ದೊರೆತಿದೆ. ಈ ನಡುವೆ ದಿಗಂತ್ ನಾಪತ್ತೆಯಾದ ದಿನ ಸಂಜೆ ಅಂಜನೇಯ ವ್ಯಾಯಾಮ ಶಾಲೆ ಬಳಿ ಅನುಮಾನಾಸ್ಪದವಾಗಿ ವಾಹನ ಓಡಾಡಿತ್ತು ಎನ್ನಲಾಗಿದೆ.
ಈ ನಡುವೆ, ದಿಗಂತ್ ಪತ್ತೆಗಾಗಿ ಪೊಲೀಸರ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.