ಬೆಂಗಳೂರು; ವನಿತೆಯರ ಪರ ಧ್ವನಿಯಾದ ಮಾಜಿ ಶಾಸಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಇದೀಗ ರಾಜ್ಯದ ಜಿಲ್ಲೆ, ಬ್ಲಾಕ್ ಹಾಗೂ ಹಳ್ಳಿ ಮಟ್ಟದಲ್ಲಿ ಮಹಿಳೆಯರ ಸೈನ್ಯ ಕಟ್ಟುವುದಾಗಿ ಘೋಷಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯ ರೆಡ್ಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆ ಮಾಡಿ ಸೆಪ್ಟೆಂಬರ್ 15ಕ್ಕೆ 40 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಸುಮಾರು 50% ಮಹಿಳೆಯರು ಇದ್ದಾರೆ. ಕಳೆದ ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ. ಮಹಿಳೆಯರಿಗೆ ಸಿಗಬೇಕಾದ ಹಕ್ಕು, ಸ್ಥಾನಮಾನ ಹಾಗೂ ರಕ್ಷಣೆ ಸಿಗುತ್ತಿಲ್ಲ. ದೇಶದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ 33% ಮೀಸಲಾತಿ ನೀಡುವ ಮಸೂದೆ ಬಗ್ಗೆ ಚರ್ಚೆ ಆರಂಭವಾಗಿ 30 ವರ್ಷಗಳೇ ಕಳೆದಿವೆ ಎಂದರು.
ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿತು. ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ನಮ್ಮ ಮಹಿಳಾ ಕಾಂಗ್ರೆಸ್ ವತಿಯಿಂದ ನಾರಿ ನ್ಯಾಯ ಎಂಬ ಅಭಿಯಾನ ಆರಂಭಿಸಲಾಯಿತು ಎಂದ ಅವರು, ಬೇರೆ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಆದಷ್ಟು ಬೇಗ ಇದನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಉನ್ನಾವೋ, ಕಥುವಾ, ಕೊಲ್ಕತ್ತಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿದ್ದೇವೆ. ಪ್ರತಿ ಬಾರಿ ನಾವು ಹೋರಾಟ ಮಾಡುತ್ತೇವೆ ಎಂದ ಸೌಮ್ಯ ರೆಡ್ಡಿ, ಮಹಿಳೆಯರನ್ನು ದೇವಿ ಎಂದು ಪೂಜೆ ಮಾಡುವ ದೇಶದಲ್ಲಿ ನಮಗೆ ಸಮಾನತೆ, ಹಕ್ಕು, ರಕ್ಷಣೆ ಸಿಗಬೇಕು ಎಂದರು.
ಬಿಜೆಪಿ ಶಾಸಕ ಮುನಿರತ್ನ ಅವರು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವ ಬಗ್ಗೆ ಕೇಳಿದಾಗ, “ಶಾಸಕರಾಗಿರಲಿ ಅಥವಾ ಪಂಚಾಯ್ತಿ ಸದಸ್ಯರೇ ಆಗಿರಲಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಾನು ಈ ಪ್ರಕರಣದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರು, ಜಾತಿಯ ವಿಚಾರವಾಗಿ ಈ ರೀತಿ ಕೀಳಾಗಿ ಮಾತನಾಡುವುದು ಸರಿಯಲ್ಲ” ಎಂದು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ವೀಕ್ಷಕಿ ಶಿಲ್ಪಿ ಆರೋರಾ ಮಾತನಾಡಿ, ಭಾನುವಾರ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ದೇಶದೆಲ್ಲೆಡೆ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಲಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಸದಸ್ಯತ್ವ ನೋಂದಣಿ ಜಾಲತಾಣ ಅನಾವರಣ ಮಾಡಲಾಗುವುದು. ಈ ಸದಸ್ಯತ್ವ ಪಡೆಯಲು ₹100 ಶುಲ್ಕ ನೀಡಬೇಕು. ಐದು ವರ್ಷಗಳ ಕಾಲ ಈ ಸದಸ್ಯತ್ವ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಮೊದಲಬಾರಿಗೆ ಈ ಅಭಿಯಾನ ನಡೆಯುತ್ತಿದ್ದು, ನಾರಿ ನ್ಯಾಯಕ್ಕಾಗಿ ಮಹಿಳೆಯರು ಮಹಿಳಾ ಕಾಂಗ್ರೆಸ್ ಜತೆ ಕೈ ಜೋಡಿಸಬೇಕು ಎಂದವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಹಿಳಾ ಕಾಂಗ್ರೆಸ್ ಉಸ್ತುವಾರಿಗಳಾದ ನಾರಾಯಣ ಸ್ವಾಮಿ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಅವರು ಉಪಸ್ಥಿತರಿದ್ದರು.