ಬೆಂಗಳೂರು: ಹಾಸನ ಜಿಲ್ಲೆಯಲ್ಲಿ 11-07-2025 ರಂದು ಸಾರಿಗೆ ಇಲಾಖೆ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಸಿಬ್ಬಂದಿಯನ್ನು ಸರ್ಕಾರ ಅಮಾನತುಗೊಳಿಸಿದೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಕಲೇಶಪುರ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬದ ಆಚರಣೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಶಿಸ್ತು ಉಲ್ಲಂಘಿಸಿರುವ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಸ್ತಿನ ಕ್ರಮ ತೆಗೆದು ಕೊಳ್ಳಲು ಸಾರಿಗೆ ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದ್ದರು. ಅದರಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆಡಳಿತ) ಎಸ್.ಎನ್. ಮಧುರ, ಅಧೀಕ್ಷಕರಾದ ಎಂ.ಕೆ. ಗಿರೀಶ್, ಮೋಟಾರು ವಾಹನ ನಿರೀಕ್ಷಕರಾದ ಎನ್ ಆರ್.ಆಶಾ, ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದ್ದು, ವಿವರಣೆಯು ಸಮರ್ಪಕವಾಗಿಲ್ಲದ ಕಾರಣ ಹಾಗೂ ಕಚೆರಿ ವೇಳೆಯಲ್ಲಿಯೇ ಒಬ್ಬ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬವನ್ನು ಆಚರಿಸಿದ್ದಷ್ಟೇ ಅಲ್ಲ, ತಾವೇ ಖುದ್ದು ಹಾಜರಾಗಿ ಶಾಲು ಹೊದಿಸಿ ಶುಭ ಹಾರೈಸಿರುವುದು ಕಂಡುಬಂದಿದೆ. ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ಈ ರೀತಿಯ ಕಾರ್ಯವು ಕಾನೂನು/ನಿಯಮ ಬಾಹಿರವಾಗಿರುತ್ತದೆ ಎಂದು ಮನಗಂಡು ಆಯುಕ್ತರು, ಸಾರಿಗೆ ಇಲಾಖೆ ರವರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿದ್ದಾರೆ ಎಂದು ಮೂಲಗಳು ತಿಳಿಸಿವೆ.