ಬೆಂಗಳೂರು: ವೈದ್ಯಕೀಯ ಕ್ಷೇತ್ರಕ್ಕೆ ಬಂದ ಮೇಲೆ ನೈತಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ನೂತನ ವೈದ್ಯರಿಗೆ ಕಿವಿಮಾತು ಹೇಳಿದ್ದಾರೆ.
ಕೋರಮಂಗಲದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಕ್ಷೇತ್ರಕ್ಕೆ ಬಂದ ಮೇಲೆ ಲಾಭದ ಬಗ್ಗೆ ಯೋಚನೆ ಮಾಡಬಾರದು. ಸೇವೆಯ ಬಗ್ಗೆ ಚಿಂತಿಸಬೇಕು ಎಂದು ಕರೆ ನೀಡಿದರು.
ಕೊರೊನ ಬಿಕ್ಕಟ್ಟು ಬಂದ ಮೇಲೆ ವೈದ್ಯರಿಗೆ ಸಾಕಷ್ಟು ಸವಾಲುಗಳು ಇವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು. ನಾನು ಒಬ್ಬ ವೈದ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದ ಅವರು, ಹಣ ಮಾಡಲು ಇನ್ನು ಅನೇಕ ಕ್ಷೇತ್ರಗಳಿವೆ ಎಂದರು.
ಗ್ರಾಮಗಳಿಗೆ ಹೋಗಿ,:
ವೈದ್ಯರಾದ ಮೇಲೆ ಕೇವಲ ನಗರಕ್ಕೆ ಸೀಮಿತ ಆದರೆ ಉಪಯೋಗವಿಲ್ಲ. ಮುಖ್ಯವಾಗಿ ಹಳ್ಳಿ ಜನರಿಗೆ ನಿಮ್ಮ ಸೇವೆ ಸಿಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೇವೆ ಸಿಗಬೇಕು. ಇದನ್ನು ಗಮನದಲ್ಲಿ ಇಟ್ಟುಕೊಂಡು ಸೇಂಟ್ ಜಾನ್ಸ್ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ. ಇದು ಅನುಕರಣೀಯವಾದ ಕೆಲಸ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣದಲ್ಲಿ ಸುಧಾರಣೆ:
ಸದ್ಯಕ್ಕೆ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸುಧಾರಣೆಗಳನ್ನು ತರುತ್ತಿದೆ. ಉತ್ತಮ ಕಲಿಕೆ ಮತ್ತು ಉತ್ತಮ ಬೋಧನೆ ಗುರಿಗಳನ್ನು ಇಟ್ಟುಕೊಂಡು ಹೆಜ್ಜೆಗಳನ್ನು ಇಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದೇ ವರ್ಷ ಜಾರಿ ಆಗುತ್ತಿದೆ. ಹೀಗಾಗಿ ಬಹು ವಿಷಯಗಳ ಆಯ್ಕೆ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಕೊಡುವ ಕೆಲಸ ಮುಂದಿನ ದಿನಗಳಲ್ಲಿ ಅಗುತ್ತದೆ ಎಂದು ಡಿಸಿಎಂ ಹೇಳಿದರು.
ಎಂಬಿಬಿಎಸ್, ಸ್ನಾತಕೋತ್ತರ ವೈದ್ಯಕೀಯವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಡಿಸಿಎಂ ಅವರು ಪದವಿ ಪ್ರದಾನ ಮಾಡಿದರು. ಅತ್ಯುತ್ತಮ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿಗೂ ಸನ್ಮಾನ ಮಾಡಲಾಯಿತು.
ಸೇಂಟ್ ಜಾನ್ಸ್ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಬೆಂಗಳೂರಿನ ಶೈಕ್ಷಣಿಕ ಘನತೆಯನ್ನು ಹೆಚ್ಚಿಸಿದೆ. ಇಂತಹ ಸಂಸ್ಥೆಗಳು ಇನ್ನು ಹೆಚ್ಚು ಬೇಕಿವೆ. ಸರಕಾರ ಈ ರೀತಿಯ ಸಂಸ್ಥೆಗಳ ಜತೆ ಕೆಲಸ ಮಾಡಲು ಸಿದ್ಧವಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.
ಕಾರ್ಯಕ್ರಮದಲ್ಲಿ ರೆವರೆಂಡ್ ಆರ್ಚ್ ಬಿಷಪ್ ಡಾ.ಜಾರ್ಜ್, ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಮುಂತಾದವರು ಉಪಸ್ಥಿತರಿದ್ದರು