ಬೆಂಗಳೂರು, ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿಯವರಿಗೆ ಸೋಲಾರ್ ನಿಂದ ವಿದ್ಯುತ್ ಉತ್ಪಾದನೆಗೆ ನೀಡಿರುವ ಪರವಾನಗಿಯಲ್ಲಿ ಆಗಿರುವ ಅವ್ಯವಹಾರ ಬಗ್ಗೆ ಸೂಕ್ತ ತನಿಖೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಬಸವರಾಜ್ ಬೊಮ್ಮಾಯಿ, ಸೋಲಾರ್ ಅವ್ಯವಹಾರವನ್ನು ಮುಚ್ಚಿಹಾಕಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಕೇವಲ 7 ಸೆಕೆಂಡಿನಲ್ಲಿ ಆನ್ ಲೈನ್ ಮೂಲಕ ನೀಡಿರುವ ಪಟ್ಟಿಯನ್ನು ನೀಡಿದರೆ ಯಾವ ರೀತಿ ಆಗಿದೆ ಎಂದು ತಿಳಿಯುತ್ತದೆ. ಅದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದರು.
ಶಾಸಕ ರೇಣುಕಾಚಾರ್ಯ ಅವರ ಸಹೋದರನ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ತಾವು ಶಾಸಕರೊಂದಿಗೆ ಮಾತನಾಡಿದ್ದು,ಅವರ ಪ್ರಕಾರ ಏನು ನಡೆದಿದೆ ಎಂದು ಮಾಹಿತಿಯನ್ನು ನೀಡಿ, ಸೂಕ್ತ ನಿರ್ದೇಶನವನ್ನು ಐ.ಜಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ಬಹುತೇಕ ಸತ್ಯಾಂಶ ಹೊರಬರುತ್ತದೆ ನಂತರ ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಲಾಗುತ್ತದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದರು.
























































