ದೆಹಲಿ: ರಾಷ್ಟ್ರೀಯವಾದದ ಪರಿಕಲ್ಪನೆಯನ್ನೇ ಜೀವಾಳವಾಗಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಇದೀಗ ಧಾರ್ಮಿಕ ಸಂಘಟನೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಜಾತಿ-ಧರ್ಮ-ಪಂಥವನ್ನು ಮೀರಿ ಭಗವಾಧ್ವಜದ ನೆರಳಲ್ಲೇ ಬೆಳೆಯುತ್ತಿರುವ ಆರೆಸ್ಸೆಸ್ ಧರ್ಮಾಂಧತೆಯ ಆರೋಪದಿಂದ ಹೊರಗುಳಿದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಸಂದರ್ಭ, ಸನ್ನಿವೇಶಗಳು ಇದನ್ನು ಸಾಕ್ಷೀಕರಿಸುತ್ತಿತ್ತಾದರೂ ರಾಜಕೀಯ ವೈರುದ್ಯದ ಪ್ರಸಂಗಗಳಿಂದಾಗಿ ಆರೆಸ್ಸೆಸ್ ಸಂಘಟನೆಗೆ ಮತೀಯವಾದದ ಲೇಪನ ಮಾಡಲಾಗಿತ್ತೇ ಹೊರತು ಸಂಘ ಕ್ಷೇತ್ರದ ಒಳಗೆ ಅದು ಕಂಡುಬರುತ್ತಿರಲಿಲ್ಲ.
ಸಂಘದ ಶಿಬಿರಗಳಾದ ಐಟಿಸಿ-ಒಟಿಸಿ, ಶಾರೀರಿಕ ವರ್ಗಗಳಲ್ಲಿ ಮುಸ್ಲಿಮರನೇಕರು ಭಾಗವಹಿಸಿ ಶಿಕ್ಷಣ ಪಡೆದಿದ್ದಾರೆ. ಹಿಂದೂ ಅಂದರೆ ರಾಷ್ಟ್ರೀಯತೆ, ಭಾರತೀಯತೆ ಎಂಬ ಅರ್ಥ ಎಂದೇ ಬೌದ್ಧಿಕ್ ಪ್ರಮುಖರು ತಿಳಿಹೇಳುತ್ತಿದ್ದರು. ಪರಕೀಯರ ಅಕ್ರಮಣಕಾರಿ ಧೋರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಸಹಜವಾಗಿಯೇ ವೈಚಾರಿಕ ಎದುರಾಳಿಗಳು ಸಂಘವನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿತ್ತು. ಇದೇ ಸಂಘ ಇದೀಗ ಮತ್ತೊಮ್ಮೆ ತಾನು ಮುಸ್ಲಿಂ ವಿರೋಧಿಯಲ್ಲ ಎಂದು ಮನುಕುಲಕ್ಕೆ ಸಾರಿ ಹೇಳಿದೆ.
ಧ್ವಜದ ನೆರಳಲ್ಲೇ ಬೆಳೆದಿರುವ ಸಂಘದ ಕಾರ್ಯಕರ್ತರು ದೇಗುಲದಲ್ಲಿನ ಪ್ರಾರ್ಥನೆಗಿಂತ ಧ್ವಜದೆದುರಿನ ಪ್ರಾರ್ಥನೆಗೆ ಆದ್ಯತೆ ನೀಡುವವರು. ಧ್ವಜವೇ ಗುರು. ಈ ಮಣ್ಣಿನ ಭಾಷೆ, ಸಂಸ್ಕೃತಿ, ಸೊಗಡನ್ನೇ ಪ್ರೇಮಿಸುವವರು. ಹಾಗಾಗಿ ಹಿಂದೂ ಧಾರ್ಮಿಕ ಸಂಗತಿಗಳಷ್ಟೇ ಕಾರ್ಯವ್ಯಾಪ್ತಿಯಲ್ಲ. ಸಕಲ ಧರ್ಮ-ಮತೀಯರೂ ಇದರ ಕಾರ್ಯಕರ್ತರೇ. ಅದೇ ಕಾರಣಕ್ಕಾಗಿ ಸಂಘದ ಪರಮೋಚ್ಚ ಪ್ರಮುಖ್ ಪ.ಪೂ.ಮೋಹನ್‌ಜೀ ಭಗವತ್ ಮತ್ತೊಮ್ಮೆ ಸಂಘದ ಒಳ ಮರ್ಮವನ್ನು ಅನಾವರಣ ಮಾಡಿದ್ದಾರೆ.
ಏನಿದು ಪ್ರತಿಧ್ವನಿ..?
ಸಂಘ ಮುಸ್ಲಿಂ ವಿರೋಧಿಯಲ್ಲ. ಹಿಂದೂತ್ವ ಎಂಬುದೂ ಮುಸ್ಲಿಂ ವಿರೋಧಿ ಅಲ್ಲ ಎಂದು ಸರಸಂಘಚಾಲಕ್ ಮೋಹನ ಭಾಗವತ್ ಪುನರುಚ್ಚರಿಸಿದ್ದಾರೆ. ಮುಸ್ಲಿಮರು ಇಲ್ಲಿ ಇರಕೂಡದು ಎಂದು ಯಾರಾದರೂ ಹೇಳಿದರೆ ಅಂತಹಾ ವ್ಯಕ್ತಿ ಹಿಂದೂವೇ ಅಲ್ಲ ಎಂದವರು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯಿಂದಾಗಿ ಘಾಜಿಯಾವಾದ್‌ನಲ್ಲಿನ ಭಾನುವಾರದ ಕಾರ್ಯಕ್ರಮವೊಂದು ಜಾಗತಿಕ ಗಮನಸೆಳೆಯಿತು.
ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದ RSS ಪರಮೋಚ್ಛ ನಾಯಕ ಪ.ಪೂ.ಸರಸಂಘಚಾಲಕ್ ಮೋಹನ್‌ಜೀ ಭಾಗವತ್, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಒಬ್ಬರ ಮೇಲೊಬ್ಬರು ಪ್ರಾಬಲ್ಯ ಸಾಧಿಸುವಂತಿರಬಾರದು ಎಂದರು.
ಗೋವು ಪವಿತ್ರ ಪ್ರಾಣಿ. ಅದರ ರಕ್ಷಣೆ ನಮ್ಮ ಹೊಣೆ. ಹಾಗೆಂದು ಹತ್ಯೆ ಮಾಡುವವರನ್ನೇ ಹತ್ಯೆ ಮಾಡುವುದು ಸರಿಯಲ್ಲ. ಅಂತಹ ವ್ಯಕ್ತಿಗಳ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದರು.
ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೂ ಅಸುರಕ್ಷತೆ ಬಗ್ಗೆ ಹೇಳಿಕೊಂಡು ಖೆಡ್ಡಕ್ಕೆ ಬೀಳಿಸುವವರೂ ಇದ್ದಾರೆ ಎಂದ ಅವರು, ಹಿಂದೂ- ಮುಸ್ಲಿಂ ಎಂಬ ಬೇಧವನ್ನು ನಾವು ಮಾಡಲ್ಲ. ನಮ್ಮ ದೃಷ್ಟಿಯಲ್ಲಿ ಧರ್ಮವನ್ನು ಹೊರತುಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ ಆಗಿದೆ. ಹಾಗಾಗಿ ಆಚರಣೆಯ ಆಧಾರದಲ್ಲಿ ಸಮಾಜವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮೋಹನ್‌ಜೀ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸರಸಂಘಚಾಲಕರ ಈ ಅಭಿಪ್ರಾಯ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಸಂಘದ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯ ಹೊಂದಿರುವವರನ್ನು ಹುಬ್ಬೇರಿಸುವಂತಿದ್ದರೂ, ಮುಸ್ಲಿಂ ರಾಷ್ಟ್ರೀಯ ಮಂಚ್ ವ್ಯಾಪ್ತಿಯ ಪ್ರಮುಖರು ಈ ವಿಚಾರವನ್ನು ಸ್ವಾಗತಿಸುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.