ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂಬಂತೆ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
‘ಸಿಂದಗಿಯಲ್ಲಿ ನಮ್ಮ ಸಮಾಜದ ಸಮಾವೇಶ ಮಾಡಿದಾಗ ಅಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಬಿಜೆಪಿಯಲ್ಲಿರುವ ದಲಿತ ಮುಖಂಡರು ದಲಿತರಿಗೆ ಅನ್ಯಾಯವಾಗುವ ಪಕ್ಷದಲ್ಲಿದ್ದಾರೆ ಎಂದರೇ ಹೊರತು. ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ದಲಿತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ಕೊಟ್ಟಿದ್ದಾರೆ. ಸಾಲ ಸೌಲಭ್ಯ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಮುಂಬಡ್ತಿ, ಗುತ್ತಿಗೆದಾರರಿಗೆ 1 ಕೋಟಿವರೆಗೂ ಮೀಸಲಾತಿ. ಸ್ಕಾಲರ್ ಶಿಪ್ ಕೊಟ್ಟರು. ಆದರೆ ಬಿಜೆಪಿ ಏನು ಮಾಡಿದೆ? ಗುತ್ತಿಗೆದಾರರಿಗೆ ನೀಡಲಾಗಿದ್ದ ಮೀಸಲಾತಿ ಕಿತ್ತುಹಾಕಿದರು. ಕಾರಜೋಳ ಸಾಹೇಬರೇ ನೀವು ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? 344 ಮಾತ್ರ. 18 ಸಾವಿರ ಕೋಟಿ ಹಣದಲ್ಲಿ 6278 ಕೋಟಿ ಬಿಡುಗಡೆ ಮಾಡಿದ್ದು, ಶೇ.28ರಷ್ಟು ಮಾತ್ರ ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ದಲಿತರು ಎಂದು ಹೇಳಿಕೊಂಡು ಓಡಾಡುವ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರೇ ನೀವು ವಿದ್ಯಾರ್ಥಿಗಳಿಗೆ ಕಳೆದ 6 ತಿಂಗಳಿಂದ ಸ್ಕಾಲರ್ ಶಿಪ್ ಯಾಕೆ ಕೊಟ್ಟಿಲ್ಲ. ದಲಿತರ ಮೇಲೆ ಕಾಳಜಿ ಇರುವವರು ಯಾಕೆ ಅದನ್ನು ಕೇಳುತ್ತಿಲ್ಲ? 781 ಕೋಟಿ ಕೊಡಬೇಕು, ಆದರೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ನೀವು ಕೇಂದ್ರ ಸರ್ಕಾರದಲ್ಲಿದ್ದು ನೀವು ದಲಿತರ ಪರವಾಗಿ ಏನು ಮಾಡಿದ್ದೀರಿ? ಸಿದ್ದರಾಮಯ್ಯನವರೂ ಇದನ್ನೇ ಹೇಳಿದ್ದು ಎಂದವರು ಹೇಳಿದರು.