ಬೆಂಗಳೂರು: ಕೆಪಿಸಿಸಿ ವತಿಯಿಂದ ಜುಲೈ 6ರಂದು ಆಯೋಜಿತವಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸುವುದಿಲ್ಲ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ದಿನಾಂಕ 6.7.2024 ರಂದು ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಹವಾಲು ಸ್ವೀಕರಿಸುವ, ‘ಕಾರ್ಯಕರ್ತರೊಂದಿಗೆ ಸಿಎಂ-ಡಿಸಿಎಂ’ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ,ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.