ಸರ್ಕಾರದ ಅನುದಾನ ಅವಲಂಭಿಸಿ KSRTC ನಿಗಮವು ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ನೀಡುತ್ತದೆಯೇ ಹೊರತು ಸ್ವಂತ ನೆಲೆಯಲ್ಲಲ್ಲ. ಅದರಂತೆಯೇ ಖಾಸಗಿ ಬಸ್ಸುಗಳಿಗೂ ಸರ್ಕಾರ ಸೂಕ್ತ ಅನುದಾನ ನೀಡಿ ‘ನಮಗೂ ಉಚಿತದ ಅವಕಾಶ ಕಲ್ಪಿಸಿ’ ಎಂಬುದು ಕರಾವಳಿ ಜನರ ಕೂಗು..
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ‘ಗ್ಯಾರೆಂಟಿ’ಯಿಂದ ಎಂಬುದು ಸ್ಪಟಿಕ ಸತ್ಯ. ಇದೀಗ ಸರ್ಕಾರ ಉಳಿದರೂ, ವರ್ಚಸ್ಸು ಉಳಿಸಿಕೊಂಡರೂ ಅದು ‘ಗ್ಯಾರೆಂಟಿ’ಯಿಂದಲೇ. ಆದರೆ ಈ ಭರವಸೆಗಳ ವಿಚಾರದಲ್ಲಿ ಅಪಸ್ವರಗಳು, ಅಪವಾದಗಳು ಮಾರ್ದನಿಸುತ್ತಿರುವುದು ಕುತೂಹಲಕಾರಿ ಬೆಳವಣಿಗೆ.
ಚುನಾವಣೆಗಳಿಗೆ ಮುನ್ನ ಪ್ರದೇಶ ಕಾಂಗ್ರೆಸ್ ಪಕ್ಷ ಐದು ಪ್ರಮುಖ ‘ಗ್ಯಾರೆಂಟಿ’ ಭರವಸೆಗಳನ್ನು ನೀಡಿತ್ತು. ಈ ಪೈಕಿ ನಾರಿಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನಾವರಣವಾಗಿದೆ. ಆದರೆ, ಮುನ್ನುಡಿ ಬರೆದಾಗಲೇ ಭಾರೀ ಪ್ರಚಾರ ಗಿಟ್ಟಿಸಿಕೊಂಡಿರುವ ಈ ‘ಶಕ್ತಿ’ ಕೊಡುಗೆ ಕರಾವಳಿ ಮಲೆನಾಡಿನ ಮಂದಿಗೆ ಮರೀಚಿಕೆಯಾಗಿದೆ.
KARNATAKA SHAKTI GUARANTEE LAUNCH:#CongressGuarantee: 📌CM Siddaramaiah, DK, CS Vandita Sharma, & others leaves to MAJESTIC'S KSRTC BUS STATION TO LAUNCH #CongressShaktiToWomen
Henceforth, for the Next 5-Years across state all women of KA will travel 4 free
HISTORIC.!! pic.twitter.com/0fk9ZAnJH9
— Gururaj Anjan (@Anjan94150697) June 11, 2023
ಪ್ರಾದೇಶಿಕ ತಾರತಮ್ಯ..? ಏನಿದು ಅಪವಾದ..?
ಕರಾವಳಿ, ಮಲೆನಾಡು ಹಾಗೂ ಗಡಿಜಿಲ್ಲೆಗಳ ಬಹುತೇಕ ಕಡೆ ಖಾಸಗಿ ಬಸ್ಸುಗಳದ್ದೇ ಪ್ರಾಬಲ್ಯವಿದೆ. ಅಂತಹಾ ಕಡೆ ಸರ್ಕಾರಿ ಬಸ್ಸುಗಳ ಓಡಾಟ ವಿರಳವಾಗಿದೆ. ಆ ಭಾಗದ ಜನರು ಇದೀಗ ತಮಗೂ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಪ್ರಮುಖವಾಗಿ ಕೆನರಾ ಬಸ್ಸು ಮಾಲಕರ ಸಂಘ ಕಾರ್ಯಸೂಚಿಸುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ, ಮಂಗಳೂರು ಸಿಟಿ ಬಸ್ಸುಗಳು ಓಡಾಡುವ ದಕ್ಷಿಣಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ವ್ಯಾಪ್ತಿಯಲ್ಲಿ, ಸಹಕಾರ ಸಾರಿಗೆಯ ಮಲೆನಾಡು ಪ್ರದೇಶದಲ್ಲಿ, ಗಡಿಜಿಲ್ಲೆಗಳಾದ ಕೋಲಾರ ಮುಂತಾದೆಡೆ ಖಾಸಗಿ ಬಸ್ಸುಗಳೇ ಜನರ ಸಾರಿಗೆಯ ಆಧಾರ. ಆದರೆ ಕೆಎಸ್ಸಾರ್ಟಿಸಿಗಷ್ಟೇ ‘ಶಕ್ತಿ’ಯ ಗ್ಯಾರೆಂಟಿ ಕೊಡುಗೆ ಸೀಮಿತವಾಗಿರುವುದರಿಂದಾಗಿ ಈ ಪ್ರದೇಶಗಳ ಜನರು ‘ಉಚಿತ’ದ ವಿಚಾರದಲ್ಲಿ ಅವಕಾಶ ವಂಚಿತರೇ.
ತಾವೂ ಈ ರಾಜ್ಯದ ಜನರು. ಹಾಗಾಗಿ ಒಂದೋ ಖಾಸಗಿ ಬಸ್ಸುಗಳಿಗೆ ಅನುದಾನ ಕೊಟ್ಟು ‘ಶಕ್ತಿ’ ಯೋಜನೆಯ ಕೊಡುಗೆ ನೀಡಿ. ಇಲ್ಲವೇ ನಮೂರಿಗೂ ಸರ್ಕಾರಿ ಬಸ್ಸುಗಳ ಸಂಚಾರ ಆರಂಭಿಸಿ ‘ಉಚಿತ’ದ ಅವಕಾಶ ನೀಡಿ ಎಂದು ಕರಾವಳಿ, ಮಲೆನಾಡಿನ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ನಡುವೆ ಖಾಸಗಿ ಬಸ್ಸುಗಳ ಪ್ರಾಬಲ್ಯವಿರುವ ಕಡೆಗಳಲ್ಲಿ ಈ ‘ಶಕ್ತಿ’ ಯೋಜನೆ ಸಿಗದೇ, ಕೆಎಸ್ಸಾರ್ಟಿಸಿ ಓಡಾಟವಿರುವ ಕಡೆಗಷ್ಟೇ ಈ ‘ಗ್ಯಾರೆಂಟಿ’ ಯೋಜನೆ ಕೇಂದ್ರೀಕೃತವಾದರೆ, ಅದು ಪ್ರಾದೇಶಿಕ ತಾರತಮ್ಯಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂಬುದು ಪ್ರಜ್ಞಾವಂತರ ಪ್ರತಿಪಾದನೆ.
ಅದೇನೇ ಅಭಿಪ್ರಾಯಗಳಿದ್ದರೂ, ಸಿದ್ದರಾಮಯ್ಯ ಸರ್ಕಾರ ಈ ಕೂಗಿಗೆ ಜಪ್ಪೆನ್ನುತ್ತಿಲ್ಲ. ಕರಾವಳಿ ಜಿಲ್ಲೆ ದಕ್ಷಿಣಕನ್ನಡದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡಾ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳದ್ದೇ ಪ್ರಾಬಲ್ಯವಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಖಾಸಗಿ ವಲಯಕ್ಕೆ ಈ ಯೋಜನೆ ವಿಸ್ತರಣೆ ಮಾಡಲು ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನಾವು ಘೋಷಣೆ ಮಾಡಿದಾಗ ಈ ಯೋಜನೆ ಆಗುತ್ತಾ ಇಲ್ವಾ ಎಂದು ಕೇಳಿದ್ದರು. ಕಾಂಗ್ರೆಸ್ ಸುಮ್ಮನೆ ಘೋಷಣೆ ಮಾಡುತ್ತಿದೆ ಎಂದು ಹೇಳಿದ್ದರು. ಆದರೆ ಸರ್ಕಾರ ನುಡಿದಂತೆ ನಡೆದಿದೆ. ಆದರೆ, ಈ ಯೋಜನೆಯನ್ನು ಸರ್ಕಾರಿ ಬಸ್’ಗಳಿಗೆ ಮಾತ್ರ ಸಿಮೀತಗೊಳಿಸಲಾಗಿದೆ ಎಂದಿದ್ದಾರೆ. ಬರೀ ಮಂಗಳೂರಿಗೆ ಖಾಸಗಿ ಬಸ್ ಗೆ ಫ್ರೀ ಕೊಡೋಕೆ ಆಗಲ್ಲ. ವಿಸ್ತರಣೆ ಮಾಡಿದರೆ ಇಡೀ ಕರ್ನಾಟಕಕ್ಕೆ ನೀಡಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಸಚಿವರ ಈ ಸ್ಪಷ್ಟನೆಯ ನಂತರ ಕರಾವಳಿ ಜನರಲ್ಲಿ ‘ತಾವು ಕನ್ನಡ ನಾಡಿನವರಲ್ಲವೇ, ಕರ್ನಾಟಕ ಸರ್ಕಾರದ ಆಡಳಿತವಿರುವ ಭಾಗದಲ್ಲೇ ನಾವೂ ಇರುವುದಲ್ಲವೇ ಎಂಬ ಅಭಿಮತ ಮಾಡಿದೆ. ಅಷ್ಟೇ ಅಲ್ಲ, ಮಹತ್ವಾಕಾಂಕ್ಷಿಯ ‘ಶಕ್ತಿ’ ಯೋಜನೆಯು ಕೆಎಸ್ಸಾರ್ಟಿಸಿ ನಿಗಮದ ಕೊಡುಗೆಯಲ್ಲ, ಸರ್ಕಾರದ ಅನುದಾನ ಅವಲಂಭಿಸಿ ಈ ನಿಗಮವು ಈ ಸೇವೆಯೆಯನ್ನು ನೀಡುತ್ತಿರುವುದು. ಅದರಂತೆಯೇ ಖಾಸಗಿ ಬಸ್ಸುಗಳಿಗೂ ಸೂಕ್ತ ಅನುದಾನ ನೀಡಿ ‘ನಮಗೂ ಉಚಿತದ ಅವಕಾಶ ಕಲ್ಪಿಸಿ’ ಎಂದು ಕರಾವಳಿಯ ಜನರು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಾ? ಒಂದು ವೇಳೆ ನಿರ್ಲಕ್ಷಿಸಿದರೆ ಮುಂದೇನಾಗುತ್ತೋ ಎಂಬುದು ಆಡಳಿತ ಪಕ್ಷದವರಿಗೆ ಚಿಂತೆಯಾಗಿ ಕಾಡಿದೆ.
ಅದೇನೇ ಇರಲಿ, ಮಹಿಳೆಯರ ಪಾಲಿಗಂತೂ ಈ ‘ಶಕ್ತಿ’ ಕೊಡುಗೆ ವರದಾನವೇ ಸರಿ. ಈ ಬಗ್ಗೆ ಮಹಿಳಾ ನಾಯಕಿಯರು, ತಮ್ಮದೇ ರೀತಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮೊದಲ ಪ್ರಯಾಣದ ವೇಳೆ ಸಿಕ್ಕಿರುವ ಟಿಕೆಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಬಹುಪರಾಕ್ ಹೇಳಿದ್ದಾರೆ.
Here’s my zero fare ticket in the free bus service launched for women in Karnataka by the Congress Government #Shakthi pic.twitter.com/cqpGnHG1IS
— Lavanya Ballal Jain (@LavanyaBallal) June 11, 2023