ಆನೇಕಲ್: ಮಹಿಳೆಯರು ವಿಶ್ವದಾದ್ಯಂತ ಅನೇಕ ರಂಗಗಳಲ್ಲಿ ಯಶಸ್ವಿಯಾಗಿ ತಮ್ಮ ಛಾಪು ಮೂಡಿಸಿದ್ದು ನಮ್ಮತನವನ್ನು ಮಾರ್ಚ್ 8ಕ್ಕೆ ಮಾತ್ರ ಸೀಮಿತಗೊಳಿಸ ಬಾರದು. ಸಾಗರ ತಳ, ವಿಶಾಲ ಭೂಮಿ, ಆಗಸ ದಾಟಿ ಮುನ್ನಡೆಯಬೇಕೆಂದು ಪಂಚಭಾಷಾ ತಾರೆ ಪದ್ಮಶ್ರೀ ಡಾ. ಭಾರತಿ ವಿಷ್ಣು ವರ್ಧನ್ ಕರೆ ನೀಡಿದರು.
ಆನೇಕಲ್ ಸಮೀಪ ಅಲಯಂನ್ಸ್ ವಿಶ್ವವಿದ್ಯಾಲಯ ಏರ್ಪಡಿಸಿದ್ದ, ವಿಶ್ವ ಮಹಿಳಾ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕಿ ಮಹಿಳೆಯರಿಗೆ ಮಹಿಳಾ ಸ್ಪಂದನ ಅವಾರ್ಡ್ ವಿತರಿಸಿ ಮಾತನಾಡಿದ ಅವರು, ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಹೆಣ್ಣು ಪರಿಪೂರ್ಣತೆಯಿಂದ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ತ್ಯಾಗಮಯಿಯಾದ ಆಕೆ ತನ್ನ ಕುಟುಂಬ ದೇಶ ಕ್ಕಾಗಿ ಕೊಡುಗೆಯನ್ನೂ ನೀಡಿ ಇತರರ ಗೆಲುವನ್ನು ತನ್ನದೆಂದು ಪರಿಭಾವಿಸಿ ತೃಪ್ತಿ ಪಡುತ್ತಾಳೆ. ಮಹಿಳೆಯರು ಇದ್ದೆಡೆ ಗೌರವ ಶಕ್ತಿ ಇದ್ದು ಪ್ರಭಾವಿತಳಾಗಿ ಕಾಣುತ್ತಾಳೆ ಎಂದರು.
ಶಿಕ್ಷಣ, ಅರೋಗ್ಯ, ಉದ್ಯೋಗ, ಕೃಷಿ, ಉದ್ಯಮ ಸೇರುದಂತೆ ಹಲವು ವಿಭಾಗದ 30ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಸಿನಿ ಕ್ಷೇತ್ರದಿಂದ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್, ಸುಧಾ ಬೆಳವಾಡಿ ಕೃಷಿ ಕ್ಷೇತ್ರದಲ್ಲಿ ಕವಿತಾ ಮಿಶ್ರಾ, ಮಾಧ್ಯಮ ಕ್ಷೇತ್ರದಲ್ಲಿ ನಮಿತಾ ಜೈನ್, ಪೂಜಾ ಪ್ರಸನ್ನ, ಖ್ಯಾತ ಮಹಿಳಾ ವೈದ್ಯರು, ವಕೀಲರು, ಉದ್ಯಮಿಗಳು ಸೇರಿದಂತೆ ಸಾಧಕರಿಗೆ ಅಲಯನ್ಸ್ ಸ್ಪಂದನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಲಯಂನ್ಸ್ ವಿವಿಯ ಸಿಎಸ್ ಆರ್ ನಿಧಿಯಿಂದ ಹಕ್ಕಿ ಪಿಕ್ಕಿ ಕಾಲನಿಯ 25 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದರು.
ಅಲಯನ್ಸ್ ವಿವಿಯ ಪ್ರೊ – ಚಾನ್ಸೆಲಾರ್ ಅಭಯ್ ಚೆಬ್ಬಿ ಮಾತನಾಡಿ, ಮಾತೃ ಹೃದಯಿ ಮಾತೆಯರ ಪಾತ್ರವನ್ನು ಉಲ್ಲೇಖಿಸಿ ಆದಿ ಗುರು ಶಂಕರಾಚಾರ್ಯರ ಉದಾಹರಣೆ ನೀಡಿ ಮಹಿಳಾ ಶಕ್ತಿಯ ಯುಕ್ತಿಯನ್ನು ಪ್ರಸ್ತಾಪಿಸಿದರು.
ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ ಒತ್ತಡ ಎಂಬುದು ಎಲ್ಲರ ದೇಹ ಹಾಗೂ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ನಮ್ಮನ್ನು ನಾವು ಸ್ವಯಂ ನಿಯಂತ್ರಣ ಪಡಿಸಿಕೊಳ್ಳುವುದು ಒಂದು ದಾರಿಯಾದರೆ ಸನ್ನಿವೇಶವನ್ನು ಪರಿಸ್ಥಿತಿಗೆ ಅನುಗುಣವಾಗಿ ಮನಃ ಸ್ಥಿತಿಯನ್ನು ಬದಲಿಸಿಕೊಳ್ಳುವುದು ಬುದ್ಧಿವಂತಿಕೆಯ ಹಾದಿ. ಸಮುದ್ರದಲ್ಲಿನ ಮಾಣಿಕ್ಯದಂತೆ ವಿಶ್ವದಲ್ಲಿ ಯಶಸ್ವಿ ಮಹಿಳೆಯರ ಸಂಖ್ಯೆ ಬಹಳಷ್ಟಿದೆ. ಭಾರತದ ಕೊಡುಗೆ ಅಪಾರವಾಗಿದ್ದು ಮನುಕುಲಕ್ಕೆ ನಿಮ್ಮ ಕೊಡುಗೆಯೂ ಮೇರು ಪರ್ವತದಷ್ಟಿದೆ. ಪ್ರಧಾನಿ ಮೋದಿರವರ ಮಹತ್ವಾ ಕಾಂಕ್ಷಿಯೋಜನೆ ಯಂತೆ ಮುಂಬರುವ ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆ ಯಲ್ಲಿ ಮಹಿಳೆಯರಿಗೆ ಶೇ. 33% ಘೋಷಣೆಯಾಗಲಿದ್ದು ದೇಶದ ಆಡಳಿತ ಚುಕ್ಕಾಣಿ ಯಲ್ಲೂ ಮಹಿಳೆಯರ ಪಾತ್ರ ಪ್ರಮುಖ ವಾಗಿರುತ್ತದೆ ಎಂದರು.
ಅಲಯನ್ಸ್ ಯೂನಿವರ್ಸಿಟಿ ಪ್ರೊ ಚಾನ್ಸಲರ್ ಅಭಯ್ ಜಿ ಛಬ್ಬಿ, ಉಪಕುಲಪತಿ ಡಾ. ಪ್ರಿಸ್ಟ್ಲಿ ಶಾನ್, ಪ್ರೊ ವೈಸ್ ಚಾನ್ಸೆಲರ್ ಪ್ರಕಾಶ್ ಬುದ್ದೂರ್ , ಡಾ. ಮತಂ ವಿಶ್ವನಾಥಯ್ಯ ರಿಜಿಸ್ಟ್ರಾರ್, ರಿಜಿಸ್ಟ್ರಾರ್ ಜನರಲ್ ಡಾ.ಸುರೇಖಾ ಶೆಟ್ಟಿ ವೇದಿಕೆಯಲ್ಲಿದ್ದರು.