ಕೇಂದ್ರ ಸರ್ಕಾರದಿಂದ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆ.. 10 ಜಿಲ್ಲೆಗಳಲ್ಲಿ 1 ಮತ್ತು 2 ನೇ ಡೋಸ್ ಲಸಿಕೆ..
ಬೆಂಗಳೂರು: ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ 5 ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಜೆಇ ಮೆದುಳು ಜ್ವರ ‘ಪ್ಲೇವಿವೈರಸ್’ ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ.
ಜೆಇ ಲಸಿಕಾ ಅಭಿಯಾನ ಕುರಿತು ಮಾಹಿತಿ ನೀಡಿದ ಸಚಿವರು, ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು
ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ ಎಂದರು.
ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಪಿಡುಗು ಗುರುತಿಸಲಾಗಿದೆ. ಭಾರತವೂ ಸೇರಿದಂತೆ ಏಷ್ಯಾದ 11 ಏಷ್ಯಾ ರಾಷ್ಟ್ರಗಳು ಈ ಪಟ್ಟಿಯಲ್ಲಿದೆ. ಪ್ರತಿ ವರ್ಷ ಸರಾಸರಿ 68,000 ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ.20 ರಿಂದ ಶೇ.30 ರಷ್ಟಿದೆ. ಗುಣಮುಖರಾದ ಶೇ.30 ರಿಂದ ಶೇ.50 ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ
ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಜೆಇ ಮೆದುಳು ಜ್ವರದ ಹಿಸ್ಟರಿ:
ಜೆಇ ಮೆದುಳು ಜ್ವರದ ಮೊದಲ ಪ್ರಕರಣ 1955ರಲ್ಲಿ ತಮಿಳುನಾಡಿನ ವೆಲ್ಲೂರ್‌ನಲ್ಲಿ ವರದಿಯಾಗಿತ್ತು. ಹೆಚ್ಚಿನ ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ.
ಕರ್ನಾಟಕದಲ್ಲಿ:
1978 ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.
2016ರಲ್ಲಿ 11 ಪ್ರಕರಣಗಳು,
2017 ರಲ್ಲಿ 23 ಪ್ರಕರಣಗಳು,
2018 ರಲ್ಲಿ 35 ಪ್ರಕರಣಗಳು,
2019 ರಲ್ಲಿ 33 ಪ್ರಕರಣಗಳು,
2020 ರಲ್ಲಿ 19 ಪ್ರಕರಣಗಳು,
2021 ರಲ್ಲಿ 25 ಪ್ರಕರಣಗಳು,
2022 ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ.
ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಎಸ್‍ಎಸ್‍ಎಲ್) ಗಳನ್ನು ಸಜ್ಜುಗೊಳಿಸಲಾಗಿದೆ. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ10 ಜಿಲ್ಲೆಗಳಲ್ಲಿ ಲಸಿಕಾಕರಣ:
- ಬಳ್ಳಾರಿ,
- ರಾಯಚೂರು,
- ಕೊಪ್ಪಳ,
- ವಿಜಯಪುರ,
- ಚಿಕ್ಕಬಳ್ಳಾಪುರ,
- ಕೋಲಾರ,
- ಮಂಡ್ಯ,
- ಧಾರವಾಡ,
- ಚಿತ್ರದುರ್ಗ
- ದಾವಣಗೆರೆ
ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಹೆಚ್ಚುವರಿಯಾಗಿ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೆಇ ಹರಡದ ಅವಧಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಈ ಅಭಿಯಾನದಲ್ಲಿ 1-15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ನಾವೀಗ ಮೆದುಳು ಜ್ವರದ ವಿರುದ್ಧ ಯುದ್ಧ ಸಾರಬೇಕಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

















































