ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ‘ರೌಡಿ’ ಕುರಿತಂತೆ ಭಾರೀ ಚರ್ಚೆ ನಡೆಡಿದೆ. ಬಿಜೆಪಿ ನಾಯಕರಿಗಿರುವ ರೌಡಿ ‘ಸೈಲೆಂಟ್’ ನಂಟು ಕುರಿತು ಕಾಂಗ್ರೆಸ್ ನೀಡುತ್ತಿರುವ ಏಟಿಗೆ ಆಡಳಿತಾರೂಢ ಬಿಜೆಪಿ ಅಕ್ಷರಶಃ ತತ್ತರಿಸಿಹೋಗಿದೆ.
ಇತ್ತೀಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದರಿಬ್ಬರು ರೌಡಿ ಶೀಟರ್ ಸೈಲೆಂಟ್ ಸುನಿಲ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ಕುರಿತಂತೆ ಕಾಂಗ್ರೆಸ್ ಟೀಕಾಸ್ತ್ರ ಪ್ರಯೋಗಿಸಿದ್ದು, ತಮ್ಮದೂ ಒಂದು ಇರಲಿ ಎಂಬಂತೆ ಸಚಿವ ಅಶ್ವತ್ಥನಾರಾಯಣ್ ಅವರು ನೀಡಿರುವ ಹೇಳಿಕೆ ಬಿಜೆಪಿಯ ಯಡವಟ್ಟಿಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದರಿಬ್ಬರೂ ಮೌನಕ್ಕೆ ಶರಣಾಗಿ ಜಾಣತನ ಮೆರೆದಿದ್ದರೆ, ಸಚಿವ ಅಶ್ವತ್ಥನಾರಾಯಣ್ ಅವರು ಹೀರೋ ಆಗಲು ನೀಡಿದ ಹೇಳಿಕೆಯಿಂದಾಗಿ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಪರಿಸ್ಥಿತಿಯನ್ನು ಎದುರಿಸುವಂತಾಯಿತು. ಇದೀಗ ಕಾಂಗ್ರೆಸ್ ನಾಯಕರು ಅಮಿತ್ ಷಾ ಅವರ ಹಿನ್ನೆಲೆಯನ್ನೇ ಕೆದಕುತ್ತಿರುವುದೇ ಬಿಜೆಪಿ ಪಾಲಿಗೆ ಸವಾಲು ಎಂಬಂತಾಗಿದೆ.
ಪ್ರಸ್ತುತ ಕೊಲೆ, ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನೂ ರೌಡಿ ಶೀಟರ್ ಆಗಿ ಸೇರಿಸಿಕೊಳ್ಳುವ ಪರಿಪಾಠವಿದೆ. ಪೊಲೀಸರು ಈ ನಿಯಮವನ್ನು ತಾರತಮ್ಯವಿಲ್ಲದೆಯೇ ಪಾಲಿಸಿದ್ದಲ್ಲಿ ನಲಪ್ಪಾಡ್, ವಿನಯ್ ಕುಲಕರ್ಣಿ ಸಹಿತ ಕಾಂಗ್ರೆಸ್ ಪಕ್ಷದ ಸಾಕಷ್ಟು ಮಂದಿ ರೌಡಿ ಶೀಟರ್‌ಗಳೇ ಆಗುತ್ತಿದ್ದರು.
ಅಷ್ಟೇ ಅಲ್ಲ, ಕ್ರಮಿನಲ್ ಹಿನ್ನೆಲೆಯುಳ್ಳವರನ್ನು ತಮ್ಮ ಪಕ್ಷ ದೂರ ಇಟ್ಟಿದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದು, ಒಂದು ವೇಳೆ ಅವರು ಹೇಳಿರುವುದು ನಿಜವೇ ಆಗಿದ್ದರೆ, ಸಚಿವರಾದ ಗೋಪಾಲಯ್ಯ, ಆನಂದ್ ಸಿಂಗ್ ಸಹಿತ ಹಲವರನ್ನು ಸಂಪುಟದಿಂದ ಕೈಬಿಡಬೇಕಿತ್ತು ಎಂಬುದು ಕಾಂಗ್ರೆಸ್ ನಾಯಕರ ಹೇಳಿಕೆ.
ಕಾಂಗ್ರೆಸ್ ಪಕ್ಷಕ್ಕೆ ಸಿ.ಟಿ.ರವಿ ಎದಿರೇಟು..
ರೌಡಿ ಲಿಸ್ಟಿನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಎದಿರೇಟು ನೀಡಿರುವ ಸಿ.ಟಿ.ರವಿ, ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಟಿ ಗಮನಸೆಳೆಯುತು
‘ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು ಎಂದವರು ಹೇಳಿದರು. ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ಸ್ಪಷ್ಟನೆ ನೀಡಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಸಿ.ಟಿ.ರವಿ ಅವರು ಉತ್ತರ ಕೊಟ್ಟರು.
ಸಿಎಂ ಆಗಿದ್ದ ದೇವರಾಜ ಅರಸು ಅವರು ತಮ್ಮಚೇಂಬರ್‌ನಲ್ಲಿ ನಟೋರಿಯಸ್ ರೌಡಿಗಳ ಜೊತೆ ಸಭೆ ನಡೆಸಿದ್ದರು. ಅಂಥ ಕೆಲಸ ನಾವು ಮಾಡುವುದಿಲ್ಲ. ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್‍ಗೆ ಇದೇ ಕಾರಣಕ್ಕೇ ನೀಡಿದ್ದಾರೆ ಎಂದು ಅವರು ಕಾಂಗ್ರೆಸ್‌ನತ್ತ ಬೊಟ್ಟುಮಾಡಿದ ವೈಖರಿಯೂ ಗಮನಸೆಳೆಯಿತು.
ನಮ್ಮದು ಮಾಸ್ ಪಾರ್ಟಿ. ನಮ್ಮ ಪಕ್ಷದ ನೀತಿ- ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗಿದೆ; ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆ ಎಂದ ರವಿ, ನಾನು ಡಿ.ಕೆ.ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ‘ಆ ದಿನಗಳು’ ಅದನ್ನು ಹೇಳಿವೆ ಎಂದು ಬಣ್ಣಿಸಿದರು.
















































