ಬೆಂಗಳೂರು: ಕೆಲ ಸಮಯದ ಹಿಂದಷ್ಟೇ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾದ ಕರಾಳ ದಂಧೆಯನ್ನು ಬೇಧಿಸಿ ವಿದೇಶಿಯರೂ ಸೇರಿದಂತೆ ಡ್ರಗ್ ಪೆಡ್ಲರ್‌ಗಳನ್ನು ಪರಪ್ಪನ ಅಗ್ರಹಾರ ಜೈಲಿನತ್ತ ಪೆರೇಡ್ ಮಾಡಿಸಿ, ಪಾತಕಿಗಳ ಪಾಳಯದಲ್ಲಿ ನಡುಕ ಹುಟ್ಟಿಸಿದ್ದ ಬೆಂಗಳೂರು ಜೆ.ಸಿ.ನಗರ ಉಪ ವಿಭಾಗದ ಪೊಲೀಸರು ಇದೀಗ ಕೊವಿಡ್ ರೋಗಿಗಳ ಹೆಸರಲ್ಲಿ ನಡೆಯುತ್ತಿರುವ ದಂಧೆಯನ್ನೂ ಬೇಧಿಸಿದ್ದಾರೆ.
ಜೆ.ಸಿ.ನಗರ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಅಖಾಡಕ್ಕಿಳಿದ ಪೊಲೀಸರು, ರೆಮಿಡಿಸಿವೀರ್ ಕೊವಿಡ್ ಜೌಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರಿಗಾಗಿ ಖೆಡ್ಡಾ ತೋಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಖದೀಮರು ಸಿಕ್ಕಿಬಿದ್ದಿದ್ದು, ರೆಮಿಡಿಸಿವೀರ್ ಅಕ್ರಮ ದಂಧೆಯ ಕರಾಳತೆಯನ್ನು ಅನಾವರಣ ಮಾಡಿದ್ದಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ನೀಡಬೇಕಿರುವ ರೆಮಿಡಿಸಿವೀರ್ ಔಷಧಿಯನ್ನು ಲಪಟಾಯಿಸುವ ಈ ಖದೀಮರು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಈ ಜೀವೌಷಧಿಯನ್ನು ಮಾರಾಟ ಮಾಡುತ್ತಿದ್ದರು.
ಈ ಜಾಲದ ಅಮಾನವೀಯ ಕೃತ್ಯದ ಸುಳಿವನ್ನು ಪತ್ತೆ ಮಾಡಿದ ಜೆ.ಸಿ.ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿನೋದ್ ಜಿರಗಾಳೆ ಈ ಕುರಿತು ಮಾಹಿತಿ ಪೇರಿಸಿದರು. ಈ ಬಗ್ಗೆ ಎಸಿಪಿ ರೀಣಾ ಸುವರ್ಣ ಜೊತೆ ಮಾಹಿತಿ ಹಂಚಿಕೊಂಡರು. ಈ ಅಕ್ರಮದ ಜಾಲ ಬೇಧಿಸಲು ಎಸಿಪಿ ರೀಣಾ ಸುವರ್ಣ ಅವರ ಸಾರಥ್ಯದಲ್ಲಿ ಅಖಾಡಕ್ಕಿಳಿದ ಇನ್‌ಸ್ಪೆಕ್ಟರ್ ನಾಗರಾಜ್ ಮತ್ತು ಪಿಎಸ್‌ಐ ವಿನೋದ್ ಜಿರಗಾಳೆ ಅವರು ಪ್ರಮುಖ ಆರೋಪಿ ಚಿಕ್ಕಲಸಂದ್ರದ ನಿವಾಸಿ ಜನಾರ್ಧನ್ ಎಂಬಾತನನ್ನು ಸೆರೆಹಿಡಿದಿದ್ದಾರೆ. ಈ ಆರೋಪಿ ನೀಡಿದ ಸುಳಿವನ್ನಾಧರಿಸಿ ಈ ದಂಧೆನಿರತ ಕೆ.ಆರ್.ಪುರಂ ನಿವಾಸಿ ದೀಪಕ್ ಹಾಗೂ ಲೋಕೇಶ್ ಎಂಬುವರನ್ನು ಬಂಧಿಸಿದ್ದಾರೆ.
ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಸೋಗಿನಲ್ಲಿ ದಂಧೆ ನಡೆಸುತ್ತಿದ್ದ ಖದೀಮರು ಬೇರೆ ಬೇರೆ ಮಾರ್ಗದಲ್ಲಿ ರೆಮಿಡಿಸಿವೀರ್ ಔಷಧಿಯನ್ನು ಲಪಟಾಯಿಸುತ್ತಿದ್ದರು. ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ ಅಥವಾ ಗುಣಮುಖರಾದರೆ ಅಂಥವರ ಬಳಿ ಹೆಚ್ಚುವರಿ ಔಷಧಿ ಸಂಗ್ರಹಿಸಿ ತಮ್ಮ ಅಕ್ರಮ ದಂಧೆಗೆ ಬಳಸುತ್ತಿದ್ದರೆನ್ನಲಾಗಿದೆ.
Zero Tolerance on Black-marketingof Remdesivir. Team JC nagar PS has done a incredible job by arresting three people with 12 vials who were into black market of Remdesivir at 24000/- cost each. Kudos to the team.@DCPNorthBCP @Jcnagarps @BlrCityPolice @CPBlr @BSBommai
— ACP J C NAGAR (@acpjcnagar) May 6, 2021
ಜೆ.ಸಿ ನಗರ ಸಮೀಪದ ಚಿನ್ನಪ್ಪ ಗಾರ್ಡನ್ ಡಿವೈನ್ ಆಸ್ಪತ್ರೆ, ಜೆ.ಸಿ.ನಗರ ಮುಖ್ಯ ರಸ್ತೆಯ ಸರ್ಕಾರಿ ಆಸ್ಪತ್ರೆ ಹಾಗೂ ಚಿರಾಯು ಆಸ್ಪತ್ರೆಯ ಬಳಿ ಈ ಆರೋಪಿಗಳು ಈ ಔಷಧಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಸಂದರ್ಭದಲ್ಲಿ ಸಿಕ್ಕಿದ ಮಾಹಿತಿಯು ಈ ಮಾಫಿಯಾದ ಪತ್ತೆಗೆ ವರದಾನವಾಯಿತೆನ್ನಲಾಗಿದೆ. ಈ ದಂಧೆಯಲ್ಲಿ ಇನ್ನೂ ಅನೇಕರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಅವರಿಗಾಗಿ ರೀನಾ ಟೀಂ ಬಲೆ ಬೀಸಿದೆ.