ಬೆಂಗಳೂರು: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮಿಡಿಸಿವರ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಗುರುವಾರದಿಂದ ನಿತ್ಯವೂ 20,000 ರೆಮಿಡಿಸಿವರ್ ಡೋಸ್‌ಗಳನ್ನು ಪೂರೈಸಲು ನಾಲ್ಕು ಔಷಧ ಕಂಪನಿಗಳು ಒಪ್ಪಿಕೊಂಡಿವೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ, ಚರ್ಚೆಯ ನಡುವೆಯೇ ರೆಮಿಡಿಸಿವರ್ ಸೇರಿ ವಿವಿಧ ಔಷಧಗಳನ್ನು ಒದಗಿಸುತ್ತಿರುವ ನಾಲ್ಕು ಕಂಪನಿಗಳಾದ ಮೈಲಾನ್, ಸಿಪ್ಲಾ, ಜ್ಯುಬಿಲಿಯೆಂಟ್ ಹಾಗೂ ಸಿಂಜಿನ್ ಕಂಪನಿಗಳ ಮುಖ್ಯಸ್ಥರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಮುಂದಿನ ಐದು ದಿನದ ಬೇಡಿಕೆ ಹಾಗೂ ತದನಂತರದ ಬೇಡಿಕೆ ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ಔಷಧಿಯನ್ನು ಮೊದಲೇ ಪೂರೈಕೆ ಮಾಡುವಂತೆ ಕೋರಿದ್ದೇನೆ. ಎಲ್ಲ ಕಂಪನಿಗಳ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಡಿಸಿಎಂ ಹೇಳಿದರು.
ಈಗ ದಿನಕ್ಕೆ 10,000 ಡೋಸ್ ರೆಮಿಡಿಸಿವರ್ ಅನ್ನು ಈ ಕಂಪನಿಗಳು ಪೂರೈಕೆ ಮಾಡುತ್ತಿವೆ. ನಾಳೆಯಿಂದ ದಿನಕ್ಕೆ ಕನಿಷ್ಠ 20,000 ಡೋಸ್ ರೆಮಿಡಿಸಿವರ್ ಅನ್ನು ಪೂರೈಕೆ ಮಾಡುವಂತೆ ಕೋರಿದೆ. ಅದಕ್ಕೆ ಕಂಪನಿಗಳು ಒಪ್ಪಿವೆ. ಈ ತಿಂಗಳ 9ನೇ ತಾರೀಖಿನ ನಂತರ ದಿನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ರೆಮಿಡಿಸಿವರ್ ಡೋಸ್ ರಾಜ್ಯಕ್ಕೆ ಹಂಚಿಕೆ ಮಾಡುವಂತೆ ಕೋರಲಾಗಿದೆ. ಜಾಗತಿಕ ಟೆಂಡರ್ ಕರೆದಿದ್ದು ಒಂದು ವಾರದಲ್ಲಿ ಅದು ಕೂಡ ಅಂತಿಮವಾಗಲಿದೆ ಎಂದು ಡಿಸಿಎಂ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಸಿಪ್ಲಾ ಕಂಪನಿಯ ಗ್ಲೋಬಲ್ ಹೆಡ್ ನಿಖಿಲ್ ಪಾಸ್ವಾನ್, ಮೈಲಾನ್ ಕಂಪನಿಯ ಸಿಇಒ ರಾಕೇಶ್, ಸಿಂಜನ್ ಕಂಪನಿಯ ಕಿರಣ್ ಮಜುಂದಾರ್ ಶಾ ಹಾಗೂ ಜ್ಯುಬಿಲಿಯೆಂಟ್ ಕಂಪನಿಯ ಉನ್ನತ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ, ಆದಷ್ಟ ಬೇಗ ಸರಬರಾಜು ಮಾಡುವಂತೆ ಕೋರಿದೆ. ರೆಮಿಡಿಸಿವರ್ ಜತೆಗೆ ಉಳಿಕೆ ಯಾವುದೆಲ್ಲ ಔಷಧಿ ಬೇಕಾಗಿದೆ, ಅದೆಲ್ಲವನ್ನು ನಿಗದಿತ ಸಮಯಕ್ಕೆ ಮೊದಲೇ ಪೂರೈಕೆ ಮಾಡಬೇಕೆಂದು ಕೇಳಿದ್ದೇನೆ. ಸರಕಾರದ ಮನವಿಗೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಇನ್ನೊಂದು ವಾರದಲ್ಲಿ ಈ ಎಲ್ಲ ಸಮಸ್ಯೆಗಳು ನೀಗಲಿವೆ ಎಂದು ಡಿಸಿಎಂ ಹೇಳಿದರು.
ರೆಮಿಡಿಸಿವರ್ ಬಳಕೆಯಲ್ಲಿ ಪಾರದರ್ಶಕತೆ:
ಈವರೆಗೆ ರೆಮಿಡಿಸಿವರ್ ಬಗ್ಗೆ ಕೊರತೆ ಎಂದು ಎಲ್ಲರೂ ಕೇಳಿದ್ದೀರಿ. ಇನ್ನು ಮುಂದೆ ಈ ಮಾತಿಗೆ ಅವಕಾಶವೇ ಇರುವುದಿಲ್ಲ. ಎಷ್ಟು ಬೇಕೋ ಅಷ್ಟೂ ರೆಮಿಡಿಸಿವರ್ ಅನ್ನು ಸರಕಾರದ ಪಡೆದುಕೊಂಡು ವೈಜ್ಞಾನಿಕವಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಲಿದೆ. ಎಷ್ಟು ಡೋಸ್ ಬಂದಿದೆ? ಎಷ್ಟು ಖರ್ಚಾಗಿದೆ? ಎಷ್ಟು ಉಳಿದಿದೆ? ಎಂಬ ಲೈವ್ ಸ್ಟೇಟಸ್ ಜತೆಗೆ, ಈ ಚುಚ್ಚುಮದ್ದು ಯಾರು ಪಡೆದರು? ಯಾರಿಗೆ ಎಷ್ಟು ಡೋಸ್ ನೀಡಲಾಗಿದೆ? ಎಂಬೆಲ್ಲ ಅಂಶಗಳು ಪಬ್ಲಿಕ್ ಡೊಮೈನ್‌ನಲ್ಲಿ ಮುಕ್ತವಾಗಿ ಪ್ರಕಟಿಸಲಾಗುವುದು. ಯಾವುದೇ ಮಾಹಿತಿಯನ್ನು ಮುಚ್ಚಿಡುವುದಿಲ್ಲ ಎಂದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.