ಉಡುಪಿ: ಅಯೋಧ್ಯೆ ಭವ್ಯ ಶ್ರೀ ರಾಮಮಂದಿರ ಉದ್ಘಾಟನೆಗೆ ತಯಾರಿ ಭರದಿಂದ ಸಾಗಿದೆ. ಇದೇ ವೇಳೆ ಪ್ರತಿಷ್ಠಾಪಿಸುವ ರಾಮಲಲ್ಲಾ ಮೂರ್ತಿ ಬಗ್ಗೆ ಕುತೂಹಲ ಹೆಚ್ಚಾಗಿದೆ. ಯಾವ ಶಿಲ್ಪಿಯ ವಿಗ್ರಹ ಪ್ರತಿಷ್ಠಾಪನೆಯಾಗುತ್ತದೆ ಎಂಬ ಚರ್ಚೆಗಳು ಸಾಗಿವೆ. ಆದರೆ ಈ ವರೆಗೂ ವಿಗ್ರಹದ ಆಯ್ಕೆ ಅಂತಿಮಗೊಂಡಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಪ್ರತಿಷ್ಠಾಪಿಸುವ ರಾಮಲಲ್ಲಾ ಮೂರ್ತಿಯನ್ನು ಜನವರಿ 17ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಎರಡು ಕಪ್ಪು ಕಲ್ಲುಗಳು ಮತ್ತು ಒಂದು ಅಮೃತ ಶಿಲೆಯಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಸುಂದರವಾಗಿ ಕೆತ್ತಲಾಗಿದೆ. ಪ್ರಾಣ ಪ್ರತಿಷ್ಠೆಗೆ ಮೊದಲು ಜ.17ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಸರಯೂ ನದಿಗೆ ತೆಗೆದುಕೊಂಡ ಹೋಗಿ ಜಲಾಭಿಷೇಕ ನಡೆಸಲಾಗುತ್ತದೆ. ಅಂದು 3 ವಿಗ್ರಹಗಳಲ್ಲಿ ಅದು ಯಾವ ವಿಗ್ರಹ ಆಯ್ಕೆಯಾಗಿದೆ ಎಂಬ ಸಂಗತಿ ಗೊತ್ತಾಗಲಿದೆ ಎಂದವರು ತಿಳಿಸಿದರು. ಈ ಆಯ್ಕೆಯು ಟ್ರಸ್ಟ್‌ನ ಎಲ್ಲಾ ಸದಸ್ಯರು ಮತ ಚಲಾವಣೆಯನ್ನು ಅವಲಂಭಿಸಿದೆ ಎಂದ ಶ್ರೀಗಳು, ಈಗಾಗಲೇ ಎಲ್ಲರೂ ಮತ ಚಲಾಯಿಸಿದ್ದಾರೆ ಎಂದರು.